ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿ: ಸಂಸದ ಬಿ.ವೈ.ರಾಘವೇಂದ್ರ

| Published : Aug 13 2024, 12:46 AM IST

ಸಾರಾಂಶ

ಶಿವಮೊಗ್ಗದಲ್ಲಿ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅವರು ಮಲೆನಾಡ ಭಾಗದಲ್ಲಿ ಕ್ರೀಡಾಸ್ಫೂರ್ತಿ ತುಂಬಿದ್ದು, ಅವರು ಓದಿನ ಜೊತೆಗೆ ಕ್ರೀಡೆಗೂ ಅಷ್ಟೇ ಆದ್ಯತೆ ನೀಡಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನು ರೂಪಿಸುವಂತಹ ಕೀರ್ತಿ ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಭಾನುವಾರ ಸಂಜೆ ನೆಹರು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ, ಶಿವಮೊಗ್ಗ- ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿಯನ್ನು ಉದ್ಘಾಟನೆ ಮಾತನಾಡಿದ ಅವರು, ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ರೂಪಿಸಲು ಕ್ರೀಡೆ ಸಹಕಾರಿ, ಇಂತಹ ಕ್ರೀಡಾಸ್ಪೂರ್ತಿ ಚುಂಚಾದ್ರಿ ಕಪ್ ನಂತಹ ಕ್ರೀಡಾಕೂಟಗಳಲ್ಲಿ ಕ್ರೀಡಾ ಪ್ರತಿಭಾನ್ವಿತರನ್ನು ಹೊರಹೊಮ್ಮಿಸಲು ಸಾಧ್ಯ ಎಂದು ಹೇಳಿದರು.

ವಿದ್ಯೆಗಷ್ಟೇ ಸೀಮಿತವಾಗದೆ ಕ್ರೀಡೆ ಮುಖಾಂತರ ಯುವಶಕ್ತಿಯನ್ನು ಬೆಳೆಸಲು, ಸುಮಾರು 22 ವರ್ಷಗಳಿಂದ ಚುಂಚಾದ್ರಿ ಕಪ್ ಮುಖಾಂತರ ಈ ಒಂದು ಕ್ರೀಡೆಗೆ ಆದ್ಯತೆಯನ್ನು ಕೊಡುವಂತಹ ಕಾರ್ಯ ಶ್ರೀಮಠದಿಂದ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಶಿವಮೊಗ್ಗದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡೆಗೆ ಹೆಚ್ಚು ಒತ್ತು ನೀಡಿ, ಆದಿಚುಂನಗಿರಿ ಸಂಸ್ಥೆಯ ಕನಸಿನಂತೆ, ಸರ್ಕಾರವು ಕೆಲಸ ಮಾಡಿದೆ. ಅಂತಹ ಸಾಕಷ್ಟು ಯೋಜನೆಯ ಸದುಪಯೋಗ ಪಡೆಯುವಂತಹ ಅವಕಾಶ ಕ್ರೀಡಾಪಟುಗಳಿಗೆ ದೊರಕುತ್ತಿದೆ ಎಂದರು.

ಸಾನಿಧ್ಯ ವಹಿಸಿದ್ದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಕ್ರೀಡಾಪಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಯನ್ನು ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.

ಜಿಲ್ಲೆಯಲ್ಲಿ ಇವತ್ತು ವಾಲಿಬಾಲ್ ಆಟ ರಾಜ ರಾಷ್ಟ್ರ ಮಟ್ಟದಲ್ಲಿ ಪ್ರಮುಖವಾಗಿ ಆಡುತ್ತಾ ಇದ್ದಾರೆ. ಒಲಿಂಪಿಕ್ಸ್‌ನಲ್ಲಿ ಇವತ್ತು ಚಿನ್ನದ ಪದಕ ಮಾತ್ರ ಇಲ್ಲದೇ, ಬೆಳ್ಳಿ ಮತ್ತು ಕಂಚಿನ ಪದಕ್ಕೆ ಮಾತ್ರ ಸೀಮಿತವಾಗಿದ್ದೇವೆ. ಇಷ್ಟೊಂದು ಜನಸಂಖ್ಯೆ ಇರುವ ಭಾರತದಲ್ಲಿ 5 ಕಂಚು ಮತ್ತು ಒಂದು ಬೆಳ್ಳಿ ಬಂತು ಎಂದರೆ ಇದಕ್ಕೆ ಕಾರಣ ವನ್ನು ಹುಡುಕುವ ಕೆಲಸವಾಗಬೇಕಾಗಿದೆ. ಆಗಿದ್ದಾಗ ಮಾತ್ರ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು, ಯುವಕರು ಮುಂದಿನ ದಿನಗಳಲ್ಲಿ ಚಿನ್ನದ ಪದಕ ಪಡೆಯಲು ದಾಪುಗಾಲು ಹಾಕುತ್ತಾರೆ ಎಂಬುದಂತೂ ಸತ್ಯ, ಎಲ್ಲಾ ಕಡೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕಾಗಿದೆ, ಆಗಿದ್ದಾಗ ಮಾತ್ರ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಸಾಯಿನಾಥ ಸ್ವಾಮೀಜಿ, ಚಿತ್ರದುರ್ಗ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಮಾದರ ಚೆನ್ನಯ್ಯ ಬಸವಮೂರ್ತಿ ಸ್ವಾಮೀಜಿ, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ , ಶಿವಮೊಗ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಜಿ.ಕಾಮತ್, ಕಾರ್ಯದರ್ಶಿ ಕೆ. ಎಸ್.ಶಶಿ ಮತ್ತಿತರರು ಇದ್ದರು.