ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಲು ಕ್ರೀಡೆ ಉತ್ತಮ ಮಾಧ್ಯಮ

| Published : Dec 17 2024, 12:45 AM IST

ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಲು ಕ್ರೀಡೆ ಉತ್ತಮ ಮಾಧ್ಯಮ
Share this Article
  • FB
  • TW
  • Linkdin
  • Email

ಸಾರಾಂಶ

ಸುವರ್ಣ ಕರ್ನಾಟಕ ಸಂಭ್ರಮದ ಆಂಗವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಮೆಸ್ಕಾಂ ತಂಡ

ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ತಾಳ್ಮೆ ಕಳೆದುಕೊಳ್ಳದೇ ಜನಸ್ನೇಹಿಯಾಗಿ ಸೌಹಾರ್ದತೆಯಿಂದ ಕಾರ್ಯ ನಿರ್ವಹಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ಮಾಧ್ಯಮವಾಗಿದೆ. ಸರ್ಕಾರದ ವಿವಿದ ಇಲಾಖೆಗಳ ನಡುವೆ ಉತ್ತಮ ಸಂಬಂಧ ಕಲ್ಪಿಸುವಲ್ಲಿಯೂ ಇಂತಹಾ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸುವರ್ಣ ಕರ್ನಾಟಕ ಸಂಭ್ರಮದ ಅಂಗವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಸರ್ಕಾರಿ ಇಲಾಖೆಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಸತತವಾಗಿ ನಡೆದಿರುವ ಸರ್ಕಾರಿ ನೌಕರರು ಮತ್ತು ಸೇವಾಸಂಸ್ಥೆಗಳ ನಡುವಿನ ಕ್ರೀಡಾಕೂಟ ಅರ್ಥಪೂರ್ಣವಾಗಿದೆ. ಸರ್ಕಾರದಿಂದ ವೇತನ ಸೇರಿದಂತೆ ಪಿಂಚಣಿ ಸೌಲಭ್ಯವನ್ನೂ ಪಡೆಯುತ್ತಿರುವ ರಾಜಕಾರಣಿಗಳಾದ ನಾವುಗಳೂ ಸರ್ಕಾರಿ ನೌಕರರಂತೆ ಎಂದೂ ಹಾಸ್ಯ ಚಟಾಕಿ ಹಾರಿಸಿದರು.

ಸರ್ಕಾರಿ ನೌಕರರು ಬಹುತೇಕ ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇರುತ್ತದೆ. ಕೆಲಸ ಕಾರ್ಯದ ಒತ್ತಡದ ನಡುವೆಯೂ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ನೆಮ್ಮದಿಗೆ ಒಂದಿಷ್ಟು ಕ್ರೀಡಾ ಚಟುವಟಿಕೆ ಅಗತ್ಯವಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಇರಬಹುದಾದ ನೌಕರರ ನಡುವಿನ ಅಧಿಕಾರ ಅಂತಸ್ತು ಮುಂತಾದ ಅಂತರವನ್ನು ದೂರ ಮಾಡುವಲ್ಲಿಯೂ ಕ್ರೀಡೆ ಸಹಕಾರಿಯಾಗಿದೆ. ನಮ್ಮ ತಾಲೂಕಿನಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯ ಕೂಡಾ ಉತ್ತಮವಾಗಿದ್ದು ಶಾಸಕನಾಗಿ ನಾನೂ ನಿರಾಳತೆಯಿಂದ ಕಾರ್ಯನಿರ್ವಸಲು ಸಾಧ್ಯವಾಗಿದೆ ಎಂದೂ ಹೇಳಿದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಸಾಹಿತ್ಯ ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿರುವ ತಾಲೂಕಿಗೆ ಆಗಮಿಸುವ ಅಧಿಕಾರಿಗಳು ಎಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಊರಿನ ಸಾರ್ವಜನಿಕರೊಂದಿಗೆ ಬೆರೆತು ಸಹಕರಿಸುತ್ತಿರುವುದು ಪ್ರಶಂಸನೀಯವಾಗಿದೆ. ಬಹು ಮುಖ್ಯವಾಗಿ ಕ್ರೀಡಾ ಚಟುವಟಿಕೆ ಇದಕ್ಕೆ ಕಾರಣವಾಗಿದೆ ಎಂದರು.

ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಶಬನಂ, ರತ್ನಾಕರ ಶೆಟ್ಟಿ, ಬಿ.ಗಣಪತಿ, ಯತಿರಾಜ್, ಬಿ.ಆರ್.ರಾಘವೇಂದ್ರ ಶೆಟ್ಟಿ, ಜ್ಯೋತಿ ಮೋಹನ್ ಮಾಜಿ ಸದಸ್ಯ ಟಿ.ಎಲ್.ಸುಂದರೇಶ್ ಇದ್ದರು.

ಈ ಕ್ರೀಡಾಕೂಟದಲ್ಲಿ 16 ತಂಡಗಳು ಪಾಲ್ಗೊಂಡಿದ್ದು, ಅಂತಿಮ ಪಂದ್ಯದಲ್ಲಿ ಮೆಸ್ಕಾಂ ತಂಡ ಕಂದಾಯ ಇಲಾಖೆ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ಗಳಿಸಿತು.