ಕ್ರೀಡೆಯೂ ಒಂದು ಶಿಕ್ಷಣ: ವಸಂತ ಬಡಿಗೇರ

| Published : Dec 18 2024, 12:47 AM IST

ಸಾರಾಂಶ

ಕ್ರೀಡೆ ಎಂದರೆ ಬರೀ ಸ್ಪರ್ಧೆಯಲ್ಲ, ಅದು ಒಂದು ಶಿಕ್ಷಣವಿದ್ದಂತೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯವನ್ನು ಕ್ರೀಡೆಯಿಂದ ಗುರುತಿಸಬಹುದು ಎಂದು ಶಿವಮೊಗ್ಗ ವಲಯ ಪ್ರಾದೇಶಿಕ ಅಧಿಕಾರಿ ವಸಂತ ಎನ್‌. ಬಡಿಗೇರ ನ್ಯಾಮತಿಯಲ್ಲಿ ಹೇಳಿದ್ದಾರೆ.

- ಶಿವಮೊಗ್ಗ ವಲಯಮಟ್ಟದ ತರಳುಬಾಳು ಕ್ರೀಡಾಮೇಳ- - - ಕನ್ನಡಪ್ರಭ ವಾರ್ತೆ ನ್ಯಾಮತಿ

ಕ್ರೀಡೆ ಎಂದರೆ ಬರೀ ಸ್ಪರ್ಧೆಯಲ್ಲ, ಅದು ಒಂದು ಶಿಕ್ಷಣವಿದ್ದಂತೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯವನ್ನು ಕ್ರೀಡೆಯಿಂದ ಗುರುತಿಸಬಹುದು ಎಂದು ಶಿವಮೊಗ್ಗ ವಲಯ ಪ್ರಾದೇಶಿಕ ಅಧಿಕಾರಿ ವಸಂತ ಎನ್‌. ಬಡಿಗೇರ ಹೇಳಿದರು.

ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದ ಹೊರವಲಯದ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ವಲಯಮಟ್ಟದ ತರಳುಬಾಳು ಕ್ರೀಡಾಮೇಳದಲ್ಲಿ ಅವರು ಮಾತನಾಡಿದರು. ಕ್ರೀಡೆ ಮಾನಸಿಕ, ದೈಹಿಕ ಸಮಸ್ಯೆಗಳನ್ನು ಎದುರಿಸಲು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವದಕ್ಕೆ ಸಹಕಾರಿಯಾಗಿದೆ. ವಿದ್ಯೆಯ ಜೊತೆಗೆ ಕ್ರೀಡೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಸಾಧು ವೀರಶೈವ ಸಮಾಜದ ಹೊನ್ನಾಳಿ ತಾಲೂಕು ಅಧ್ಯಕ್ಷ ಹುಣಸಘಟ್ಟ ಎಚ್‌.ಎ.ಗದ್ದಿಗೇಶ್‌ ಮಾತನಾಡಿದರು. ಅಧ್ಯಕ್ಷತೆಯನ್ನು ತರಳಬಾಳು ವಿದ್ಯಾಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಡಿ.ತೀರ್ಥಲಿಂಗಪ್ಪ ವಹಿಸಿದ್ದರು.

ಸಾಧು ವೀರಶೈವ ಸಮಾಜ ನ್ಯಾಮತಿ ತಾಲೂಕು ಅಧ್ಯಕ್ಷ ಕೋಡಿಕೊಪ್ಪ ಜಿ.ಶಿವಪ್ಪ, ಪಿ.ಜಿ.ಈಶ್ವರಪ್ಪಗೌಡ, ಗಂಜೀನಹಳ್ಳಿ ಮಲ್ಲೇಶಪ್ಪ, ಕೆ.ಸಿ.ಬಸವರಾಜಪ್ಪ, ಪರಮೇಶ್ವರಪ್ಪ, ಡಿ.ಜಯಪ್ಪ, ಜಗದೀಶ್‌, ಶಾಲೆ ಮುಖ್ಯಶಿಕ್ಷಕಿ ಶ್ವೇತ, ಡಾ.ಶಶಿಧರ್‌ ಸೇರಿದಂತೆ ಮತ್ತಿತರರಿದ್ದರು.

2024-25ನೇ ಸಾಲಿನ ಶಿವಮೊಗ್ಗ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ತರಳಬಾಳು ಕ್ರೀಡಾಮೇಳದಲ್ಲಿ ಶಿವಮೊಗ್ಗ ವಲಯದ ಅಗರದಳ್ಳಿ, ಬಳ್ಳಿಗಾವಿ, ಬೆನಕನಹಳ್ಳಿ, ಚನ್ನಗಿರಿ, ನಲ್ಲೂರು, ಮಾರವಳ್ಳಿ, ಭದ್ರಾವತಿ, ಹೊದಿಗೆರೆ, ಹನಸವಾಡಿ, ಗೋಪೇನಹಳ್ಳಿ, ದಾನಿಹಳ್ಳಿ ಸೇರಿ 12 ಶಾಲೆಗಳು ಭಾಗವಹಿಸಿದ್ದವು.

ಬಾಲಕಿಯರ ವಿಭಾಗದಲ್ಲಿ 100ಮೀ ಓಟ ದಾನಿಹಳ್ಳಿ ಶಾಲೆಯ ಪುಷ್ಪ ಪ್ರಥಮ, 400ಮೀ ಓಟ ಸ್ಫೂರ್ತಿ ಎಚ್‌.ಎಂ. ಪ್ರಥಮ, 1500ಮೀ ಓಟ ಯಶೋಧ ಪ್ರಥಮ, ರಿಲೇ 4*100 ದಾನಿಹಳ್ಳಿ ಶಾಲೆ ಪ್ರಥಮ, ಶಾಟ್‌ಪುಟ್‌ ಪೂರ್ವಿಕ ಗೋಪೇನಹಳ್ಳಿ ಪ್ರಥಮ, ಗುಂಪು ಆಟಗಳಲ್ಲಿ ವಾಲಿಬಾಲ್‌ ಮತ್ತು ಖೋ ಖೋ ದಾನಿಹಳ್ಳಿ ಶಾಲೆ ಪ್ರಥಮ, ಕಬ್ಬಡಿ ಬೆನಕನಹಳ್ಳಿ ಪ್ರಥಮ, ಬಾಲಕರ ವಿಭಾಗದಲ್ಲಿ 100ಮೀ ಓಟ ಅರ್ಜುನ್‌ ಹರಮಘಟ್ಟ ಪ್ರಥಮ, 400ಮೀ ಓಟ ಅಗರದಳ್ಳಿ ಪ್ರಥಮ, ಯೋಗಾಸನ ಅಜಯ್‌ ಪ್ರಥಮ, 1500ಮೀ ಓಟ ಮಂಜುನಾಥ ಹೊದಿಗೆರೆ ಪ್ರಥಮ, ವಾಲಿಬಾಲ್‌ ನಲ್ಲೂರು ಪ್ರಥಮ, ಖೋಖೋ ನಲ್ಲೂರು ಪ್ರಥಮ, ಕಬಡ್ಡಿ ಹನಸವಾಡಿ ಪ್ರಥಮ ಬಹುಮಾನಗಳನ್ನು ಗಳಿಸಿದ್ದಾರೆ.

- - -