ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ಪ್ರಾಚೀನ ಜಾನಪದ ಕ್ರೀಡೆಯಾದ ಕುಸ್ತಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಶನಿವಾರ ಗಾಂಧಿನಗರ ಯುವಜನ ಸಂಘ ಹಮ್ಮಿಕೊಂಡಿದ್ದ ೪೯ನೇ ವರ್ಷದ ರಾಷ್ಟ್ರಮಟ್ಟದ ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ರಾಜಮಹಾರಾಜರ ಆಶ್ರಯದಲ್ಲಿ ಬೆಳೆಯುತ್ತಿದ್ದ ಕುಸ್ತಿ ಕಲೆ ಇಂದು ದಾನಿಗಳ ಸಹಕಾರದಿಂದ ಮುಂದುವರೆದುಕೊಂಡು ಬರುತ್ತಿದೆ ಎಂದರು.
ಸಾಗರದಲ್ಲಿ ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ, ವಿಜಯದಶಮಿಯಂದು ಗಾಂಧಿನಗರ ಯುವಜನ ಸಂಘ ದಸರಾ ಕುಸ್ತಿ ಯನ್ನು ಆಯೋಜಿಸುವ ಮೂಲಕ ಕುಸ್ತಿ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ. ಸಂಘದ ಶ್ರೇಯೋಭಿವೃದ್ಧಿಗೆ ಬೇಕಾದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷ್ ಕೆ.ಜಿ. ಮಾತನಾಡಿ, ಸಂಸ್ಥೆಯೊಂದು ೪೯ ವರ್ಷಗಳ ಕಾಲ ಸದೃಢವಾಗಿ ಬೆಳೆದು ಬಂದಿದೆ ಎಂದರೆ, ಅದರ ಹಿಂದೆ ಸಂಘದ ಹಿರಿಯರ, ಪದಾಧಿಕಾರಿಗಳ, ಸಾರ್ವಜನಿಕರ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ. ಗಾಂಧಿನಗರ ಯುವಜನ ಸಂಘ ನಡೆಸುವ ರಾಷ್ಟ್ರ ಮಟ್ಟದ ಕುಸ್ತಿ ಇಡೀ ದೇಶದಲ್ಲಿಯೇ ಮನೆಮಾತಾಗಿದ್ದು, ಪಂಜಾಬ್, ನವದೆಹಲಿ ಸೇರಿದಂತೆ ಬೇರೆಬೇರೆ ರಾಜ್ಯದ ನೂರಾರು ಕುಸ್ತಿಪಟುಗಳು ಪಾಲ್ಗೊಳ್ಳುತ್ತಿರು ವುದೇ ಇದಕ್ಕೆ ಸಾಕ್ಷಿಯಾಗಿದೆ. ಮುಂದಿನ ವರ್ಷ ಸಂಸ್ಥೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದರು.
ನಗರಸಭೆ ಸದಸ್ಯೆ ಮಧುಮಾಲತಿ ಮತ್ತು ಸಂಚಾಲಕ ಸಂತೋಷ್ ಸದ್ಗುರು ಮಹಿಳಾ ಕುಸ್ತಿಗೆ ಚಾಲನೆ ನೀಡಿದರು. ನಗರಸಭೆ ಸದಸ್ಯರಾದ ಗಣಪತಿ ಮಂಡ ಗಳಲೆ, ಸೈಯದ್ ಜಾಕೀರ್, ಆರ್.ಶ್ರೀನಿವಾಸ್ ಮೇಸ್ತ್ರಿ, ಪ್ರಮುಖರಾದ ಕೆ.ಸಿದ್ದಪ್ಪ, ಪ್ರಸನ್ನ ಕೆ.ಜಿ., ಎಚ್.ಆರ್.ಶ್ರೀಧರ್, ಕಲಸೆ ಚಂದ್ರಪ್ಪ, ಧರ್ಮರಾಜ್, ರವಿ, ಎಂ.ಎನ್.ಪ್ರಕಾಶ್, ಮಲ್ಲಿಕಾರ್ಜುನ, ರಾಮಪ್ಪ, ವೆಂಕಟೇಶ್ ಬಿಳಿಸಿರಿ, ದಿನೇಶ್ ಗೌಡ ಇನ್ನಿತರರು ಹಾಜರಿದ್ದರು.