ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕ್ರೀಡಾ ಕೂಟಗಳು ಸಮಾಜ ಬಾಂಧವರು ಒಗ್ಗೂಡಲು ಉತ್ತಮ ಅವಕಾಶ. ಕ್ರೀಡೆಯಿಂದ ಮನೋಲ್ಲಾಸ ಹಾಗೂ ಉತ್ತಮ ಆರೋಗ್ಯದಿಂದ ಇರಲು ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಅಧ್ಯಕ್ಷ, ವೀರಶೈವ ಸಮಾಜದ ಗೌರವಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ಘಟಕದ ವತಿಯಿಂದ ಇಲ್ಲಿಗೆ ಸಮೀಪದ ಅರಮೇರಿ ಕಳಂಚೇರಿ ಶ್ರೀ ಮಠದ ಗದ್ದುಗೆಗೆ ಪೂಜೆ ನೆರವೇರಿಸಿದ ಸ್ವಾಮೀಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಅಯೋಜಿಸಲಾಗಿದ್ದ ೨೦೨೪ರ ಸಾಲಿನ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರದ ಗುಂಡು ಎಸೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಸ್ಪರ್ಧೆಯಲ್ಲಿ ಸೋಲು ಮತ್ತು ಗೆಲುವು ಸಹಜ ಆದರೂ ಭಾಗವಹಿಸುವುದು ಮುಖ್ಯವಾಗಿದೆ, ಪರಸ್ಪರ ಒಗ್ಗೂಡುವಿಕೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಮೂಲಕ ಸಂಘಟನೆಯ ಪ್ರೀತಿ ಮನೋಭಾವ ನಿರ್ಮಣ ಸಾಧ್ಯವಾಗಲಿದೆ ಎಂದರು.ಕ್ರೀಡಾ ಸ್ಪರ್ಧೆಯಲ್ಲಿ ಮಕ್ಕಳಿಗೆ ೧೦೦ ಮೀ ಓಟದ, ಮಹಿಳೆಯರಿಗೆ ನಿಂಬೆ ಹಣ್ಣಿನ ಚಮಚ ಓಟ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗ ಜಗ್ಗಾಟ ಮತ್ತು ಭಾರದ ಗುಂಡು ಎಸೆತ, ಮೂರು ಕಾಲಿನ ಓಟ, ಕಣ್ಣು ಮುಚ್ಚಿ ಮಡಿಕೆ ಒಡೆಯುವುದು ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಸ್ಪರ್ಧೆಯಲ್ಲಿ ವಿಜೇತರಿಗೆ ಮತ್ತು ಭಾಗವಹಿಸಿದ್ದ ಸ್ಪರ್ಧಿಗಳಿಗೂ ಅತಿಥಿಗಳು ಬಹುಮಾನ ವಿತರಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಮಾಜಿ ಉಪಾಧ್ಯಕ್ಷ ಎಸ್.ಜಿ. ಮರಿಸ್ವಾಮಿ ಕ್ರೀಡಾ ಕೂಟ ಉದ್ಘಾಟಿಸಿದರು.ತಾಲೂಕು ಘಟಕದ ಅಧ್ಯಕ್ಷ ಎನ್.ಎಂ. ರಾಜೇಶ್, ಉಪಾಧ್ಯಕ್ಷ ಶ್ರೀಕಂಠ (ರಘು), ಕಾರ್ಯದರ್ಶಿ ಎಸ್.ವಿ. ಚಂದ್ರಶೇಖರ್, ಖಜಾಂಚಿ ಡಿ.ಎಸ್. ಲೋಕೇಶ್, ಜಿಲ್ಲಾ ಉಪಾಧ್ಯಕ್ಷೆ ಅನು ಚಂದ್ರಶೇಖರ್, ಮಹಿಳಾ ಘಟಕದ ಚೈತ್ರ ರಾಜೇಶ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಇದ್ದರು.