ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಿ.ಇ.ಎಸ್. ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಹೇಳಿದರು.
ಹಿರೇಕೆರೂರು: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸ, ನಾಯಕತ್ವಗುಣ, ಏಕಾಗ್ರತೆ ಹಾಗೂ ತಂಡದ ಮನೋಭಾವವನ್ನು ಬೆಳೆಸುತ್ತದೆ. ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಿ.ಇ.ಎಸ್. ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಹೇಳಿದರು.
ಪಟ್ಟಣದಲ್ಲಿ ಹಾವೇರಿ ವಿಶ್ವವಿದ್ಯಾಲಯ ಹಾಗೂ ಬಿ.ಆರ್. ತಂಬಾಕದ ಪ್ರಥಮದರ್ಜೆ ಮಹಾವಿದ್ಯಾಲಯ ಸಹಯೋಗದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಮಟ್ಟದ ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯನ್ನುಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟವನ್ನು ನಮ್ಮಕಾಲೇಜಿನಲ್ಲಿ ಆಯೋಜಿಸಲು ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಗೆಲುವಿನ ಜೊತೆಗೆಕ್ರೀಡಾ ಸ್ಫೂರ್ತಿ, ಶಿಸ್ತು ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು. ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆಯನ್ನುಗುರುತಿಸಲು ಉತ್ತಮ ವೇದಿಕೆಯಾಗಿವೆ. ವಿಶ್ವವಿದ್ಯಾಲಯ ಮಟ್ಟದ ಈ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿವಿಧ ಮಹಾವಿದ್ಯಾಲಯಗಳ ಪುರುಷರ ತಂಡಗಳು ಭಾಗವಹಿಸಿ ತಮ್ಮಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು. ಆರಂಭಿಕ ಪಂದ್ಯಗಳಿಂದಲೇ ಆಟಗಾರರು ಅತ್ಯುತ್ತಮ ಕೌಶಲ್ಯ ಹಾಗೂ ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶಿಸಿದರು. ವೇಗದ ಸ್ಮ್ಯಾಶ್‌ಗಳು, ನಿಖರವಾದ ಡ್ರಾಪ್ ಶಾಟ್‌ಗಳು, ಚುರುಕಾದ ರಕ್ಷಣಾತ್ಮಕ ಆಟ ಹಾಗೂ ರೋಚಕ ರ‍್ಯಾಲಿಗಳು ಪಂದ್ಯಗಳಿಗೆ ಹೆಚ್ಚಿನ ಮೆರುಗು ನೀಡಿದವು ಎಂದು ಹೇಳಿದರು.
ಕಾಲೇಜು ಅಭಿವೃದ್ದಿ ಮಂಡಳಿ ಅಧ್ಯಕ್ಷ ಜಗದೀಶ ತಂಬಾಕದ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಜ್ಞಾನವನ್ನು ಸಂಪಾದಿಸಿದರೆ, ಕ್ರೀಡೆಯ ಮೂಲಕ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ಸಹನೆ, ನಾಯಕತ್ವದ ಗುಣ ಹಾಗೂ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವಿದೆ.ಬ್ಯಾಡ್ಮಿಂಟನ್ ಒಂದು ವೇಗದ ಮತ್ತು ಕೌಶಲ್ಯಪೂರ್ಣ ಕ್ರೀಡೆಯಾಗಿದೆ. ಈ ಆಟದಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೆ ಏಕಾಗ್ರತೆ, ಚುರುಕುತನ, ಸಮಯೋಚಿತ ನಿರ್ಧಾರ, ತಾಳ್ಮೆ ಮತ್ತು ನಿರಂತರ ಅಭ್ಯಾಸ ಬಹಳ ಮುಖ್ಯ. ಪ್ರತಿಯೊಂದು ಹೊಡೆತವೂ ಆಟಗಾರನ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಪ್ರತಿಯೊಂದು ಪಂದ್ಯವೂ ಹೊಸ ಅನುಭವವನ್ನು ನೀಡುತ್ತದೆ. ಹೀಗಾಗಿ ಇಂತಹ ಪಂದ್ಯಾವಳಿಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಮತ್ತು ಅವರ ಕ್ರೀಡಾಕೌಶಲ್ಯವನ್ನುಅಭಿವೃದ್ಧಿಪಡಿಸಲು ಉತ್ತಮ ವೇದಿಕೆಯಾಗಿವೆ ಎಂದರು.
ಸ್ಪರ್ಧೆಯ ಅಂತಿಮ ಹಂತದ ಪಂದ್ಯಗಳು ಅತ್ಯಂತ ರೋಚಕವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದವು. ಉತ್ತಮ ಪ್ರದರ್ಶನ ನೀಡಿದ ತಂಡಗಳು ಮತ್ತು ಕ್ರೀಡಾಪಟುಗಳನ್ನು ಅಭಿನಂದಿಸಿ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಈ ವೇಳೆ ಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ, ಪ್ರಾಚಾರ್ಯ ವಿಜಯಕುಮಾರ ಮುದಿಗೌಡರ, ಆಯ್ಕೆ ಸಮಿತಿ ಸದಸ್ಯರಾದ ಸಿ.ಎನ್. ಸೊರಟೂರ, ಬಸವರಾಜ ಲಕ್ಷ್ಮಿಶ್ವರ, ವಿನಯ್‌ಕುಮಾರ ಎಚ್.ಎನ್., ರವಿ ಮುದಿಗೌಡರ, ಗುರು ಪೂಜಾರ, ಹಾಲೇಶ ಮೇಡ್ಲೇರಿ, ಅಬಿಷೇಕ ಅಡ್ಡೇರ, ಹರೀಶ ಎಸ್., ಪ್ರವೀಣ ಚೀರೂ, ತಸೀಶ ಗಿರಿಮಲ್ಲಪ್ಪನವರ, ರಾಧಿಕಾ ಜಿ., ಸಿ.ಆರ್. ದೂದೀಹಳ್ಳಿ, ನಾಗರಾಜ ಉಪ್ಪಾರ, ಸಾಮಿತ್ರಮ್ಮ ಬಿ., ಲತಾ ಬಿ.ವೈ., ರವಿಕುಮಾರ ಎಂ., ಶಶಿಕುಮಾರ ಕಡೂರ, ಪ್ರವೀಣ ಅಂಗಡಿ, ಪೂಜಾ ಅಡಗಂಟಿ, ಕಿರಣ್ ಬಾಗಲರ, ಕಾಲೇಜಿನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಭಾಗವಹಿಸಿದ್ದರು.