ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಮಕ್ಕಳು ಕಲಿಕೆಯಲ್ಲಿ ಮುಂದಿದ್ದರೆ ಸಾಲದು. ಅದರ ಜೊತೆ ಕ್ರೀಡೆಗೂ ಅಷ್ಟೇ ಮಹತ್ವ ನೀಡಬೇಕು. ಕ್ರೀಡೆಗಳು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಕಲಿಕೆಯಲ್ಲಿ ಕ್ರೀಡೆಗೆ ಪ್ರಾಧಾನ್ಯತೆ ಇರಲಿ ಎಂದು ಶ್ರೀ ವಿದ್ಯಾನಂದ ಶ್ರೀಗಳು ಹೇಳಿದರು.ಅವರು ಪಟ್ಟಣದಲ್ಲಿ ಏಕಲ್ ಅಭಿಯಾನ ಕರ್ನಾಟಕ ಸಂಭಾಗ್ ಬಾಗಲಕೋಟ ಅಂಚಲ್ ವತಿಯಿಂದ ಆಯೋಜಿಸಿದ್ದ ಗುಳೇದಗುಡ್ಡ ಸಂಚ್ ಮಟ್ಟದ ಕ್ರೀಡೋತ್ಸವದ ಸಾನ್ನಿಧ್ಯ ವಹಿಸಿ, ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಅಂದರೆ ಬರೀ ಓದು ಬರಹ ಅಲ್ಲ. ಮಕ್ಕಳಲ್ಲಿ ಶಿಕ್ಷಣಕ್ಕೆ ನೀಡಿದ ಆದ್ಯತೆಯನ್ನು ಆಟಗಳಿಗೂ ನೀಡಿ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸಬೇಕಾಗಿದೆ. ಮಕ್ಕಳ ಕಲಿಕೆಯಲ್ಲಿ ಬರೀ ಪಾಠ ಆಗದೇ ಅವರಲ್ಲಿ ಆಟದ ಭಾವನೆ ಬೆಳೆಸಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ, ಉತ್ತಮ ಆರೋಗ್ಯಕ್ಕಾಗಿ ಮಕ್ಕಳಲ್ಲಿ ಆಟದ ರೂಢಿ ಮಾಡಿಸಬೇಕು ಎಂದರು.ಡಾ.ವಿ.ಎ.ಬೆನಕನಾಳ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಂಚಲ್ ಅಧ್ಯಕ್ಷ ಚಂದ್ರಶೇಖರ ಕಟಗೇರಿ, ತಾಲೂಕು ಏಕಲ್ ಅಭಿಯಾನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಜನಾಳ, ಖಜಾಂಚಿ ಮಹಾದೇವ ಜಗತಾಪ, ಸಾವಿತ್ರಿ ಜೋಗುರ, ಸವಿತಾ ಉಂಕಿ, ಮಲ್ಲು ಹುನಗುಂಡಿ, ಅಭಿಯಾನ ಪ್ರಮುಖ ಪ್ರಶಾಂತ, ಈರಣ್ಣ ಅಲದಿ, ಗಂಟೆಪ್ಪ ಬೀಳಗಿ, ಎಸ್.ಎಸ್.ಉಳ್ಳಾಗಡ್ಡಿ, ಏಕಲ್ ವಿದ್ಯಾಲಯದ ಆಚಾರ್ಯರು ಹಾಗೂ ಹಂಗರಗಿ, ಕೆಲವಡಿ, ತೆಗ್ಗಿ, ತಿಮ್ಮಸಾಗರ, ತೋಗುಣಸಿ, ಹುಲ್ಲಿಕೇರಿ, ಹಂಸನೂರ ಸೇರಿದಂತೆ ತಾಲೂಕಿನ ಏಕಲ್ ವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಇದ್ದರು.