ಸಾರಾಂಶ
ಹಳಿಯಾಳ: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಧ್ಯ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಆರೋಗ್ಯ ಚೆನ್ನಾಗಿರುವವರಿಗೆ ಮಾನಸಿಕ ಏಕಾಗ್ರತೆ ಹಾಗೂ ಆರೋಗ್ಯ ಲಭಿಸುತ್ತದೆ. ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಮಂಗಳವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಪಂ, ಶಿಕ್ಷಣ ಇಲಾಖೆಯವರು ಜಂಟಿಯಾಗಿ ಆಯೋಜಿಸಿದ್ದ ಹಳಿಯಾಳ ಮತ್ತು ದಾಂಡೇಲಿ ತಾಲೂಕು ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ಕ್ರೀಡೆಗಳು ವಿದ್ಯಾಭ್ಯಾಸದ ಒಂದು ಭಾಗವಾಗಲಿ ಎಂದರು.ಬಡತನ ಹಾಗೂ ಇನ್ನಿತರ ಕಾರಣಗಳಿಂದ ಸಾಕಷ್ಟು ಕ್ರೀಡಾಪ್ರತಿಭೆಗಳ ಅನಾವರಣ ಆಗುತ್ತಿಲ್ಲ. ಅದಕ್ಕಾಗಿ ಸ್ಥಿತಿವಂತರು ಆದಷ್ಟು ಕ್ರೀಡಾಪಟುಗಳಿಗೆ ನೆರವಿನ ಹಸ್ತವನ್ನು ಚಾಚಬೇಕು ಎಂದರು.ಪುರಸಭೆಯ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಮಾಜಿ ಅಧ್ಯಕ್ಷ ಅಜರ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷ ಫಯಾಜ ಶೇಖ್, ಸುವರ್ಣ ಮಾದರ, ಕಾಂಗ್ರೆಸ್ ಮುಖಂಡ ಸುಭಾಸ ಕೊರ್ವೆಕರ, ಕೃಷ್ಣ ಪಾಟೀಲ, ಶಿವಾಜಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದ ಇಸಾಕ ಕುಂಬಿ, ಪ್ರಾಚಾರ್ಯ ಅಮೀನ ಅತ್ತಾರ ಇದ್ದರು.
ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಪ್ರಭಾರ ಇಒ ಸತೀಶ್ ಆರ್, ಬಿಇಒ ಪ್ರಮೋದ ಮಹಾಲೆ, ಸಿಪಿಐ ಜಯಪಾಲ್ ಪಾಟೀಲ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಝಕೀರ ಜಂಗೂಬಾಯಿ, ಹಳಿಯಾಳ ದಾಂಡೇಲಿ ದೈಹಿಕ ಶಿಕ್ಷಕರ ಪ್ರಮುಖರು ಇತರರು ಇದ್ದರು. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.