ಕ್ರೀಡೆ ಜೀವನದಲ್ಲಿ ಶಿಸ್ತು, ಸಂಯಮ, ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ನಿವೃತ್ತ ಕರ್ನಲ್ ಹಾಗೂ ಮ್ಯಾರಥಾನ್ ಓಟಗಾರ ಕಾವೇರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕ್ರೀಡೆ ಜೀವನದಲ್ಲಿ ಶಿಸ್ತು, ಸಂಯಮ, ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ನಿವೃತ್ತ ಕರ್ನಲ್ ಹಾಗೂ ಮ್ಯಾರಥಾನ್ ಓಟಗಾರ ಕಾವೇರಪ್ಪ ಹೇಳಿದರು.

ವಾಂಡರರ್ಸ್‌ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ದಿ.ಸಿ.ವಿ. ಶಂಕರ್ ಸ್ವಾಮಿ ಅವರ ಹೆಸರಿನಲ್ಲಿ ಏರ್ಪಡಿಸಲಾಗಿರುವ ೩೨ನೇ ವರ್ಷದ ಮಕ್ಕಳ ಬೇಸಿಗೆ ಕ್ರೀಡಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆ ದೈಹಿಕ ಸಾಮರ್ಥ್ಯದೊಂದಿಗೆ ಸಾಧನೆ ಮಾಡುವ ಛಲವನ್ನು ಬಲಪಡಿಸುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಾವಕಾಶಗಳೂ ದೊರಕುತ್ತವೆ ಎಂದು ಹೇಳಿದರು. ಮಕ್ಕಳು ಮೊಬೈಲ್‌ಗೆ ದಾಸರಾಗದೆ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ರಾತ್ರಿ ವೇಳೆಯಲ್ಲಿ ಬರೆಯವುದು ಹಾಗೂ ಬೆಳಗ್ಗಿನ ಜಾವ ಬೇಗನೇ ಎದ್ದು ಓದಬೇಕು, ಹಾಗೇ ಮಾಡಿದ್ದಲ್ಲಿ ಸುಲಭವಾಗಿ ಅರ್ಥವಾಗುತ್ತದೆ, ಅಲ್ಲದೆ ಅಂಕ ಗಳಿಸಲು, ವೃತ್ತಿಪರ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಂಡರ್ಸ್‌ ಅಧ್ಯಕ್ಷ ಕೋಟೇರ ಮುದ್ದಯ್ಯ ಮಾತನಾಡಿ ಶಿಬಿರದಲ್ಲಿ ತರಬೇತುದಾರರು ಹೇಳಿಕೊಡುವದನ್ನು ಮನನ ಮಾಡಿಕೊಂಡು ಅಭ್ಯಸಿಸಬೇಕು, ಚೆನ್ನಾಗಿ ಕಲಿತು ಮುಂದೆ ಬರಬೇಕೆಂದು ಕರೆ ನೀಡಿದರು.

ಹುಟ್ಟು ಹಬ್ಬಾಚರಣೆ: ಇದೇ ಸಂದರ್ಭದಲ್ಲಿ ದಿ.ಶಂಕರ್ ಸ್ವಾಮಿ ಅವರ ಹುಟ್ಟು ಹಬ್ಬವಾದ್ದರಿಂದ ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬ ಆಚರಿಸಲಾಯಿತು. ಶಂಕರ್ ಸ್ವಾಮಿ ಹಾಗೂ ಅವರ ಗುರು ದಿ. ಜಾಕ್ ಸುಬ್ಬಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಲಾಯಿತು.

ವೇದಿಕೆಯಲ್ಲಿ ಹಿರಿಯ ಹಾಕಿ ಆಟಗಾರರಾದ ಪಾಡೆಯಂಡ ಮಣಿ ಮೇದಪ್ಪ, ಆಸಿಫ್, ಸಿ.ವಿ.ಶಂಕರ್ ಅವರ ಪುತ್ರ ಗುರುದತ್ ಇದ್ದರು. ಶಿಬಿರದ ಸಂಚಾಲಕ ಬಾಬು ಸೊಮಯ್ಯ, ಪದಾಧಿಕಾರಿಗಳಾದ ಬೊಪ್ಪಂಡ ಶಾಂ ಪೂಣಚ್ಚ, ಕೋಟೇರ ನಾಣಯ್ಯ, ನಂದಾ, ಕುಡೆಕಲ್ ಸಂತೋಷ್, ಟಿ.ವಿ.ಲೋಕೇಶ್, ತರಬೇತುದಾರರಾದ ಕೇನೇರ ಕಾವ್ಯ, ನಾಟೋಳಂಡ ಸುರೇಶ್, ಪೋಷಕರು, ಇತರರು ಪಾಲ್ಗೊಂಡಿದ್ದರು.

ಶಿಬಿರಾರ್ಥಿಗಳಾದ ಯೋಗಿತಾ ಶೆಟ್ಟಿ ಹಾಗೂ ಅಪೇಕ್ಷ ರೈ ಪ್ರಾರ್ಥಿಸಿದರೆ, ಯೋಗ ಗುರು ಕೆ.ಕೆ. ಮಹೇಶ್‌ಕುಮಾರ್ ಸ್ವಾಗತಿಸಿ, ನಿರೂಪಿಸಿದರು.