ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ಕ್ರೀಡೆಗಳು ಸಾಮರಸ್ಯ ಬೆಸೆಯುವ ಕೇಂದ್ರಗಳು. ಸೋಲು ಗೆಲುವುಗಳ ಮೂಲಗಳನ್ನು ಹುಡುಕದೆ ಕ್ರೀಡಾಪಟುವಾಗಿ ಭಾಗಿಗಳಾಗಬೇಕು ಎಂದು ಮಡಿಕೇರಿ ಎಫ್.ಎಂ.ಸಿ. ಕಾಲೇಜು ದೈಹಿಕ ಶಿಕ್ಷಕ ಕಂಬೀರಂಡ ರಾಕಿ ಪೂವಣ್ಣ ಅವರು ಸಮಾರಂಭದಲ್ಲಿ ಹೇಳಿದರು.ಸಂತ ಅನ್ನಮ್ಮ ಪದವಿ ಕಾಲೇಜು ವಿರಾಜಪೇಟೆ ದೈಹಿಕ ಶಿಕ್ಷಣ ವಿಭಾಗ ಮತ್ತು ವಾಣಿಜ್ಯ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಮೈದಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಅಂತರ್ ಕಾಲೇಜು 5+2 ಕಾಲ್ಚೆಂಡು ಪಂದ್ಯಾಟದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ರಾಷ್ಟ್ರಮಟ್ಟದ ಅಂತರ್ ಕಾಲೇಜು ಪಂದ್ಯಾಟಗಳನ್ನು ಆಯೋಜಿಸುವುದು ಕಷ್ಟಸಾಧ್ಯವಾದರು. ದಿಟ್ಟತನದಿಂದ ಪಂದ್ಯಾಟ ಆಯೋಜನೆ ಮಾಡಿರುವುದು ಸಂಸ್ಥೆಯ ಕೀರ್ತಿ ಹೆಚ್ಚಿಸಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾ ಪಟುಗಳು ಕ್ರೀಡಾಸ್ಪೂರ್ತಿಯಿಂದ ಪ್ರತಿನಿಧಿಸಬೇಕು. ಘರ್ಷಣೆಗಳಾಗದಂತೆ ಎಚ್ಚರವಹಿಸಬೇಕು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮಾನಸಿಕವಾಗಿ ಧೃಢತೆಯನ್ನು ಕಾಯ್ದುಕೊಳ್ಳಬಹುದು ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.ಸಂತ ಅನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಮೊದಲೈ ಮುತ್ತು ಅವರು ಮಾತನಾಡಿ, ಎರಡು ದಿನಗಳ ಕಾಲ ಕಾಲೇಜಿನ ಅವರಣದಲ್ಲಿ ಹಬ್ಬದ ವತಾವರಣ ಸೃಷ್ಟಿಯಾಗಿತ್ತು. ಕ್ರೀಡೆಗಳು ಪರಸ್ಪರ ಬಾಂಧವ್ಯ ಸಂಬಂಧಗಳು ಒಂದಾಗುವ ವೇದಿಕೆಯಂತೆ. ಕ್ರೀಡೆಗಳಲ್ಲಿ ಭಾಗವಹಿಸಿದಲ್ಲಿ ಮಾತ್ರ ಆರೋಗ್ಯದ ಮಹತ್ವ ಅರಿಯಲು ಸಾಧ್ಯವಾಗುತ್ತದೆ. ಕಾಲೇಜು ಪರಿಸರವು ಶೈಕ್ಷಣಿಕ, ಕ್ರೀಡಾ, ಕಲೆಗಳು ಮತ್ತು ಇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಂದ ಹಾಗೂ ಸನಿಹದ ಕೇರಳ ರಾಜ್ಯದ ಕಾಲೇಜುಗಳಿಂದ ಕ್ರೀಡಾ ಪಟುಗಳು ಆಗಮಿಸಿ ಕ್ರೀಡಾ ಘನತೆಯನ್ನು ಹೆಚ್ಚಿಸಿದೆ. ದಾನಿಗಳ ಸಹಕಾರ ಮತ್ತು ಆಯೋಜಕರ ಅವಿರತ ಶ್ರಮದಿಂದ ಎರಡು ದಿನಗಳ ಕಾಲದ ಕಾಲ್ಚೆಂಡು ಪಂದ್ಯಾಟವು ಯಶಸ್ವಿಯಾಗಿದೆ ಎಂದು ಹೇಳಿದರು.ಎ.ಕ್ಯೂ.ಸಿ,ಎ, ಸಂಚಾಲಕರು ಮತ್ತು ಬಿ.ಬಿ.ಎ ವಿಭಾಗದ ಮುಖ್ಯಸ್ಥರಾದ ಹೇಮಾ ಬಿ.ಡಿ, ದೈಹಿಕ ಶಿಕ್ಷಕರಾದ ರಾಜು ರೈ, ಕ್ರೀಡಾ ಕಾರ್ಯದರ್ಶಿ ಕಾವೇರಪ್ಪ, ವಿದ್ಯಾರ್ಥಿ ಸಂಚಾಲಕರಾದ ರಹೀಂ ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ಕ್ರೀಡಾ ವರದಿ:ರಾಷ್ಟ್ರಮಟ್ಟದ ಅಂತರ್ ಕಾಲೇಜು 5+2 ಪುರುಷರ ಕಾಲ್ಚೆಂಡು ಪಂದ್ಯಾಟವು ನ. 7, 8 ರಂದು ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಕೇರಳ ರಾಜ್ಯದ ಮಲಪುರಂ, ಇರಿಟ್ಟಿ, ಕಣ್ಣೂರು ಜಿಲ್ಲೆಗಳ ಪದವಿ ಕಾಲೇಜು ತಂಡಗಳು, ರಾಜ್ಯದ ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡ, ಮಂಗಳೂರು ಜಿಲ್ಲೆಗಳ ಪದವಿ ಕಾಲೇಜು ತಂಡಗಳು ಹಾಗೂ ಕೊಡಗು ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಲೀಗ್ ಮಾದರಿಯಲ್ಲಿ ಪಂದ್ಯಾಟದಲ್ಲಿ ಒಟ್ಟು 26 ತಂಡಗಳು ಭಾಗವಹಿಸಿದ್ದವು. ಪ್ರಥಮ ಸೆಮಿ ಪೈನಲ್ ಪಂದ್ಯ ಅನುಗ್ರಹ ಪದವಿ ಕಾಲೇಜು ಕುಶಾಲನಗರ ತಂಡ ಮತ್ತು ಮಹಾಜನಸ್ ಪದವಿ ಕಾಲೇಜು ಮೈಸೂರು ತಂಡಗಳ ಮಧ್ಯೆ ನಡೆದು 2-0 ಗೋಲುಗಳಿಂದ ಅನುಗ್ರಹ ಪದವಿ ಕಾಲೇಜು ಫೈನಲ್ ಹಂತಕ್ಕೆ ತಲುಪಿತು. ದ್ವೀತಿಯ ಸೆಮಿ ಫೈನಲ್ ಪಂದ್ಯಾಟವು ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ಬೆಳ್ತಂಗಡಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಪೋಕ್ಲು ತಂಡಗಳ ಮಧ್ಯೆ ನಡೆದು 3-2 ಗೋಲುಗಳಿಂದ ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ತಂಡ ಫೈನಲ್ ಪ್ರವೇಶ ಮಾಡಿತು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯಾಟ ಸೆಮಿ ಫೈನಲ್ ಪಂದ್ಯಾಟದಲ್ಲಿ ಸೋಲು ಕಂಡ ನಾಪೋಕ್ಲು ತಂಡ ಮತ್ತು ಮಹಾಜನಾಸ್ ಮೈಸೂರು ತಂಡಗಳ ಮಧ್ಯೆ ಪೆನಾಲ್ಟಿ ಶೂಟೌಟ್ ನಲ್ಲಿ 3-2 ಗೋಲುಗಳಿಂದ ಮಹಾಜನಾಸ್ ಮೈಸೂರು ತಂಡ ವಿಜಯವಾಯಿತು. ಫೈನಲ್ ಪಂದ್ಯಾಟ ಅನುಗ್ರಹ ಪದವಿ ಕಾಲೇಜು ಕುಶಾಲನಗರ ಮತ್ತು ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ಬೆಳ್ತಂಗಡಿ ತಂಡಗಳ ಮಧ್ಯೆ ನಡೆಯಿತು. ಪಂದ್ಯಾಟದ ಆರಂಭದಿಂದಲೇ ಬೆಳ್ತಂಗಡಿ ತಂಡ ರೋಚಕ ಪಂದ್ಯಾಟವನ್ನಾಡಿತು ಪ್ರಥಮಾರ್ಥದಲ್ಲಿ 2 ಗೋಲು ದ್ವಿತೀಯಾರ್ಧದಲ್ಲಿ ಎರಡು ಗೋಲುಗಳಿಂದ ಮುನ್ನಡೆ ಸಾಧಿಸಿತು. ಬದಲಿಗೆ ಕುಶಾಲನಗರ ತಂಡ ಎದುರಾಳಿ ತಂಡದ ವಿರುದ್ಧ ಒಂದು ಗೋಲು ಸಾಧಿಸುವಲ್ಲಿ ಶಕ್ತವಾಯಿತು. ಸೆಕ್ರೇಡ್ ಹಾರ್ಟ್ ಪದವಿ ಕಾಲೇಜು ತಂಡ ಹೆಚ್ಚಿನ ಗೋಲುಗಳಿಂದ ವಿಜಯದ ಮಾಲೆಗೆ ಕೊರೊಳೊಡ್ಡಿತು.
ವಿಜೇತ ತಂಡಗಳಿಗೆ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಅನುಗ್ರಹ ಪದವಿ ಕಾಲೇಜಿನ ಆಫ್ರೀದ್ ಉತ್ತಮ ಡಿಫೇಂಡರ್ ಪ್ರಶಸ್ತಿ, ಸರಣಿ ಪುರುಷೋತ್ತಮ ಪ್ರಶಸ್ತಿ ಶಾವದ್ ನಾಪೋಕ್ಲು, ಹೆಚ್ಚು ಗೋಲು ದಾಖಲೆ ಪ್ರಶಸ್ತಿಯನ್ನು ಸೆಕ್ರೇಡ್ ಹಾರ್ಟ್‌ನ ವಿನು, ಉತ್ತಮ ಗೋಲಿ ಪ್ರಶಸ್ತಿಯನ್ನು ಶೀಜು ಸೆಕ್ರೇಡ್ ಹಾರ್ಟ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಸೆಕ್ರೇಡ್ ಹಾರ್ಟ್‌ನ ತನ್ವೀರ್ ಅವರು ವೈಯುಕ್ತಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಶೇಷಪ್ಪ ಅಮ್ಮತ್ತಿ, ಶ್ರೀನಿವಾಸ್, ರದೀಶ್ ಒಂಟಿಅಂಗಡಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.ಸಂತ ಅನಮ್ಮ ಪದವಿ ಕಾಲೇಜಿನ ಬಿ.ಬಿ.ಎ ವಿಭಾಗ ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರು, ಪದವಿಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಕಾಲೇಜು, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಂದ್ಯಾಟದಲ್ಲಿ ಹಾಜರಿದ್ದರು.