ಮಹಿಳೆಯಲ್ಲಿನ ಕ್ರೀಡಾಸಕ್ತಿ ಉತ್ತಮ ಆರೋಗ್ಯಕ್ಕೆ ಪೂರಕ

| Published : Aug 31 2025, 01:09 AM IST

ಮಹಿಳೆಯಲ್ಲಿನ ಕ್ರೀಡಾಸಕ್ತಿ ಉತ್ತಮ ಆರೋಗ್ಯಕ್ಕೆ ಪೂರಕ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆ ಮಾನಸಿಕ ಮತ್ತು ದೈಹಿಕ, ಸಾಮಾಜಿಕವಾಗಿ ಜವಾಬ್ದಾರಿಯುತ ನಡವಳಿಕೆಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ. ದೈನಂದಿನ ಬದುಕಿನಲ್ಲಿ ಕಷ್ಟ- ನಷ್ಟಗಳನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಲು ಮತ್ತು ಆಹ್ಲಾದಕರವಾಗಿ ಮನಸ್ಸನ್ನು ಹೊಂದಲು ಕ್ರೀಡೆ ಸಹಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸಲು ಆಸಕ್ತಿ ಬೆಳೆಸಿಕೊಂಡರೆ ಉತ್ತಮ ಆರೋಗ್ಯ ಹೊಂದಬಹುದು ಎಂದು ಅಂತಾರಾಷ್ಟ್ರೀಯ ಮಾಜಿ ಅಥ್ಲೆಟಿಕ್ ಕ್ರೀಡಾಪಟು ಪಾರ್ವತಿ ಕಾಂತರಾಜ್ ತಿಳಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸ್ತ್ರೀರೋಗ ವಿಭಾಗದ ಮಮತೆಯ ಮಡಿಲು ಅಂಗಳದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತ ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕ್ರೀಡೆ ಮಾನಸಿಕ ಮತ್ತು ದೈಹಿಕ, ಸಾಮಾಜಿಕವಾಗಿ ಜವಾಬ್ದಾರಿಯುತ ನಡವಳಿಕೆಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ. ದೈನಂದಿನ ಬದುಕಿನಲ್ಲಿ ಕಷ್ಟ- ನಷ್ಟಗಳನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಲು ಮತ್ತು ಆಹ್ಲಾದಕರವಾಗಿ ಮನಸ್ಸನ್ನು ಹೊಂದಲು ಕ್ರೀಡೆ ಸಹಕಾರಿಯಾಗಿದೆ ಎಂದರು.

75 ವರ್ಷದ ಈ ವಯಸ್ಸಿನಲ್ಲೂ ಪ್ರತಿನಿತ್ಯ ಕ್ರೀಡಾ ಆಸಕ್ತಿಯನ್ನು ಹೊಂದಿದ್ದು, ಕ್ರೀಡಾಂಗಣ ಮತ್ತು ಇನ್ನಿತರೆ ಸ್ಥಳಗಳಲ್ಲಿ ವ್ಯಾಯಾಮಗಳಲ್ಲಿ ತಲ್ಲೀನಳಾಗುತ್ತೇನೆ. ಆದ್ದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

ಮಹಿಳೆಯರು ದೈನಂದಿನ ಬದುಕಿನಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಕುಟುಂಬದ ಇತರೆ ಸದಸ್ಯರು ಅನುಕರಣೆ ಮಾಡುತ್ತಾರೆ ಎಂದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಪಾರ್ವತಿ ಕಾಂತರಾಜು ಅವರು ಜೀವಿತದ ಅವಧಿಯಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. 20ಕ್ಕೂ ವಿವಿಧ ರಾಷ್ಟ್ರಗಳಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರ ಮತ್ತು ರಾಜ್ಯದ 140ಕ್ಕೂ ಹೆಚ್ಚು ಪದಕಗಳನ್ನು ಪಡೆದಿದ್ದಾರೆ ಎಂದು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಮಾತನಾಡಿ, ಕ್ರೀಡೆ ಮಹಿಳೆಯರಿಗೆ ಸ್ವಾವಲಂಬಿ ಜೀವನ ಸಾಧಿಸಲು ಸಹಕಾರಿಯಾಗಿದೆ ಎಂದರು. ಈ ವೇಳೆ ಮಿಮ್ಸ್‌ನ ಶುಶ್ರೂಷಕಿಯರ ಅಧೀಕ್ಷಕ ಅಧಿಕಾರಿಗಳಾದ ತುಳಸಿ, ರೇಣು, ಬಾಲ್‌ ಬ್ಯಾಡ್ಮಿಂಟನ್ ತರಬೇತುದಾರ ಯಶ್ವಂತ್, ಮಮತೆಯ ಮಡಿಲುವಿನ ರವಿ, ಎಂ.ಬಿ.ಸುರೇಶ್ ಮತ್ತು ಶ್ರೀನಾಥ್ ಉಪಸ್ಥಿತರಿದ್ದರು.