ಈ ಬಾರಿ ನಡೆಯಲಿರುವ ಗಣರಾಜ್ಯೋತ್ಸವದಂದು ಕ್ರೀಡಾ ವಿಭಾಗದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಈ ಬಾರಿ ನಡೆಯಲಿರುವ ಗಣರಾಜ್ಯೋತ್ಸವದಂದು ಕ್ರೀಡಾ ವಿಭಾಗದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ತಾಲೂಕು ಆಡಳಿತ ಸೌಧದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಬಾರಿಯ ೭೭ನೇ ಗಣರಾಜ್ಯೋತ್ಸವದಂದು ಯಾವುದೇ ಕ್ರೀಡೆಯಲ್ಲಿ ರಾಜ್ಯಮಟ್ಟದ ಇಲ್ಲವೇ ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಪ್ರತಿನಿಧಿಸಿದ್ದರೆ ಅಂತಹವರು ತಮ್ಮ ಹೆಸರಿನೊಂದಿಗೆ ವಿವರವನ್ನು ತಾಲೂಕು ಆಡಳಿತಕ್ಕೆ ನೀಡುವಂತೆ ಮನವಿ ಮಾಡಿದರು.

ತಹಸೀಲ್ದಾರ್ ಮಮತಾ ಎಂ. ಮಾತನಾಡಿ, ಎಲ್ಲವೂ ಪ್ರತಿವರ್ಷದಂತೆ ನಿಯಮಾವಳಿಗೆ ಅನುಗುಣವಾಗಿ ನಡೆಯಬೇಕು. ಜೊತೆಗೆ ವೇದಿಕೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಅಲಂಕಾರ ಮಾಡಬೇಕು. ಈ ನಿಟ್ಟಿನಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕರ್ತವ್ಯ ನಿರ್ವಹಿಸಬೇಕು. ಅಗತ್ಯವಾದ ಹೂ ಗಿಡಗಳನ್ನು ತೋಟಗಾರಿಕೆ ಇಲಾಖೆಯಿಂದ ಪಡೆಯಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಟ್ಟಣದ ಶಾಲಾ ವಿದ್ಯಾರ್ಥಿಗಳಿಂದ ನಡೆಸಿಕೊಡುವಂತೆ ಶಿಕ್ಷಣ ಇಲಾಖೆಗೆ ತಿಳಿಸಿದ ಅವರು, ಧ್ವಜವಂದನೆಯ ವೇಳೆ ಪೊಲೀಸ್, ಹೋಮ್‌ಗಾರ್ಡ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ , ಎನ್ ಸಿಸಿ ವಿದ್ಯಾರ್ಥಿಗಳಿಂದ ಪಥಸಂಚಲನವನ್ನು ಉತ್ತಮವಾಗಿ ನಡೆಸುವಂತೆ ಸೂಚಿಸಿದರು.

ಸಭೆಯಲ್ಲಿ ಇಒ ದೊಡ್ಡಸಿದ್ದಯ್ಯ, ಬಿಇಒ ಕಾಂತರಾಜು, ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ಮಂಜಮ್ಮ, ಬೆಸ್ಕಾಂ ಎಇಇ ಗವಿರಂಗಯ್ಯ, ಸಿಡಿಪಿಒ ಹೊನ್ನಪ್ಪ, ಪಶುಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜು, ಕನ್ನಡಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಕನ್ನಡ ಭುವನೇಶ್ವರಿ ಯುವಕ ಸಂಘದ ಸಿ.ಕೆ. ಶಾಂತಕುಮಾರ್ ಸೇರಿದಂತೆ ಇತರರು ಹಾಜರಿದ್ದರು.