ಸಾರಾಂಶ
- ಕರುಗುಂದ ಗ್ರಾಮದಲ್ಲಿ ಕೆ.ಎಸ್.ದಿವಾಕರ ಗೌಡ ಭತ್ತದ ಗದ್ದೆಯಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬತ್ತದ ಸಸಿ ಮಡಿಯಿಂದ ಬತ್ತದ ಕಟಾವಿನ ವರೆಗೂ ಬೆಂಕಿ ರೋಗ ಕಂಡು ಬರುತ್ತದೆ. ಬೆಂಕಿ ರೋಗ ನಿಯಂತ್ರಕ್ಕೆ ರೈತರು ಆರಂಭಿಕ ಹಂತದಲ್ಲಿಯೇ ಔಷಧಿ ಸಿಂಪಡಿಸಬೇಕು ಎಂದು ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಮಮತಾ ಹೇಳಿದರು.
ಬುಧವಾರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯ್ತಿಯ ಕರುಗುಂದದ ಪ್ರಗತಿಪರ ಕೃಷಿಕ ಕೆ.ಎಸ್.ದಿವಾಕರ್‌ಗೌಡ ಅವರ ಬೇಸಿಗೆ ಬೆಳೆಯ ಬತ್ತದ ಗದ್ದೆಯಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಬತ್ತದ ಗದ್ದೆಗಳಲ್ಲಿ ಹೆಚ್ಚಾಗಿ ಕಂಡು ಬರುವ ರೋಗ ಎಂದರೆ ಬೆಂಕಿ ರೋಗ. ಇದು ಶಿಲೀಂದ್ರ ರೋಗವಾಗಿದ್ದು ಬೆಳೆಯ ಕಾಂಡ, ತೆನೆ ಹಾಗೂ ಕಣ್ಣಿನ ಭಾಗದಲ್ಲಿ ರೋಗ ಆಕ್ರಮಿಸಿಕೊಳ್ಳುತದೆ. ಹವಾಮಾನ ವೈಪರೀತ್ಯದಿಂದ ಹಾಗೂ ಅತಿಯಾದ ನೈಟ್ರೋಜನ್ ಯುಕ್ತ ರಾಸಾಯನಿಕ ಬಳಕೆ ಮಾಡುವುದರಿಂದ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ರೈತರು ಈ ರೋಗದ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತ ಎಂದರು.ಎಲೆ ಮೇಲೆ ಚಿಕ್ಕ ಕಂದು ಬಣ್ಣದ ಚುಕ್ಕಿಗಳು ಬರುತ್ತವೆ. ಇವು ರೋಗದ ಲಕ್ಷಣಗಳಾಗಿವೆ. ಆ ಸಂದರ್ಭದಲ್ಲಿಯೇ ರೈತರು ರೋಗ ಹರಡದಂತೆ ಗದ್ದೆ ಹಾಗೂ ಗದ್ದೆ ಬದುಗಳಲ್ಲಿರುವ ಕಳೆಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಬೆಂಕಿ ರೋಗ ಕಾಣಿಸಿ ಕೊಂಡ ಕೂಡಲೇ ರೈತರು ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಯಾದ ಔಷಧೋಪಾಚಾರ ಮಾಡಬೇಕು. ಇದರಿಂದ ಬೆಂಕಿ ರೋಗ ನಿಯಂತ್ರಿಸಬಹುದಾಗಿದೆ ಎಂದರು.
ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬ ರೈತ ಕೂಡ ಅನುಭವ ಇರುವ ರೈತರ ಅಥವಾ ಕೃಷಿ ಇಲಾಖೆ ಸಲಹೆಗಳನ್ನು ಪಡೆಯಬೇಕು. ಇದರಿಂದ ಉತ್ತಮ ಬೆಳೆ ನಿರೀಕ್ಷಿಸಬಹುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ರೈತ ಮುಖಂಡ ಕರುಗುಂದ ಕೆ.ಎಸ್. ದಿವಾಕರ್‌ಗೌಡ, ಕೆ.ಸಿ.ಜಗದೀಶ್, ಸುಂದರೇಶ್‌ಹೆಗ್ಡೆ, ಉಪೇಂದ್ರ, ಟೋನಿ, ಕೆ.ಎಸ್.ಲಕ್ಷ್ಮಣಗೌಡ, ಶ್ರೀಧರ್, ಶ್ರೀಕಾಂತ್, ಸುಬ್ರಮಣ್ಯ, ದೇವೇಂದ್ರ ಮತ್ತಿತರರು ಉಪಸ್ಥಿತರಿದ್ದರು.