ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಕುಡಿಯುವ ನೀರು, ವಿದ್ಯುತ್, ಜಾನುವಾರುಗಳಿಗೆ ಮೇವು ಬಗ್ಗೆ ಉಪವಿಭಾಗ ವ್ಯಾಪ್ತಿಯಲ್ಲಿ ಸಮಸ್ಯೆ ಇದ್ದರೆ ಗಮನಕ್ಕೆ ತರಬೇಕು. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಹೇಳಿದರು. ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಶನಿವಾರ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಉಪ ವಿಭಾಗ ಮಟ್ಟದ ಕುಡಿಯುವ ನೀರು, ಮೇವು ಲಭ್ಯತೆ ಕುರಿತ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಯಾವ ಸಮಸ್ಯೆ ಇದೆ ಎಂಬುದನ್ನು ತಿಳಿಯಬೇಕು. ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆಯನ್ನು ಸಾಧ್ಯವಾದಷ್ಟು ಬಗೆಹರಿಸಬೇಕು. ಮಳೆಯಾಗುತ್ತಿರುವ ಕಾರಣ ಕುಡಿಯುವ ನೀರಿನಲ್ಲಿ ಮಳೆ ನೀರು ಶೇಖರಣೆಯಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಸಂಭವವಿದೆ. ಚರಂಡಿ, ಟ್ಯಾಂಕ್ ಸುತ್ತಮುತ್ತ ಸೊಳ್ಳೆ ಕೀಟನಾಶಕವನ್ನು ಸಿಂಪಡಣೆ ಮಾಡಬೇಕು ಎಂದರು.ಮಳೆ ಗಾಳಿಗೆ ವಿದ್ಯುತ್ ಲೈನ್‌ಗಳು ಜೋತು ಬೀಳುವುದು, ನೆಲಕ್ಕೆ ಬಿದ್ದು ಅವಘಡ ಸಂಭವಿಸುವ ಮುಂಚೆ ಬೆಸ್ಕಾಂ ಅಧಿಕಾರಿಗಳು ಅದನ್ನು ಸರಿಪಡಿಸಬೇಕು. ಸಣ್ಣ ಮಳೆ ಬಂದ ತಕ್ಷಣ ವಿದ್ಯುತ್ ಖಡಿತ ಮಾಡುತ್ತಿದ್ದಾರೆಂದು ಜನರು ದೂರುತ್ತಿದ್ದು, ಈ ಬಗ್ಗೆ ಗಮನಹರಿಸಿ ಎಂದು ಬೆಸ್ಕಾಂ ಎಇಇ ಮನೋಹರ್‌ಗೆ ಸೂಚಿಸಿದರು. ತಾಪಂ ಇಒ ನಾಗರಾಜು ಮಾತನಾಡಿ, ತಾಲೂಕಿನಲ್ಲಿ ಗಂಗನಘಟ್ಟ ಮತ್ತು ಹುಚ್ಚನಹಳ್ಳಿಯಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಬಂದಿದೆ. ಇಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಸುವ ಅವಶ್ಯಕತೆ ಇದೆ. ಅಲ್ಲದೆ ಕರಡಿ, ತಡಸೂರು, ನೊಣವಿನಕೆರೆ, ಕುಪ್ಪಾಳು ಗ್ರಾಮಗಳಲ್ಲಿ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆ ಬರುತ್ತಿದ್ದು ಜನರಿಂದ ದೂರುಗಳು ಬರುತ್ತಿವೆ ಎಂದು ಹೇಳಿದರು.
ಹೊಸ ಬೋರ್‌ವೆಲ್ ಕೊರೆಸುವ ಬದಲು ಖಾಸಗಿಯವರಿಂದ ನೀರು ಪಡೆದುಕೊಂಡು ನೀರಿನ ಸಮಸ್ಯೆ ಬಗೆಹರಿಸಬೇಕು. ಮಳೆಯಾಗುತ್ತಿರುವ ಕಾರಣ ನೀರಿಲ್ಲದಿರುವ ಬೋರ್‌ವೆಲ್‌ಗಳನ್ನು ರೀ-ಬೋರ್ ಮಾಡಿಸಿ. ಹೊಸ ಬೋರ್‌ವೆಲ್ ಕೊರೆಸುವ ಬಗ್ಗೆ ಚಿಂತಿಸೋಣ ಎಂದರು. ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ಇಲ್ಲ. ಚರಂಡಿ, ಆರ್.ಓ ಫ್ಲಾಂಟ್‌ಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ. ಕಸವಿಲೇವಾರಿಯೂ ಸಹ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮಳೆ ಬಂದರೆ ಸಾಕು ಕೆ.ಎಸ್.ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಳೆ ನೀರು ಶೇಖರಣೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಡಿಪೋ ವ್ಯವಸ್ಥಾಪಕರು, ಸಣ್ಣ ನೀರಾವರಿ ಅಧಿಕಾರಿಗಳ ಜೊತೆ ಮಾತನಾಡಿದ್ದು, ಬಸ್ ನಿಲ್ದಾಣ ತೀರ ತಗ್ಗಾಗಿದ್ದು ಎತ್ತರ ಮಾಡಿದರೆ ನೀರು ಶೇಖರಣೆಯಾಗುವುದಿಲ್ಲ ಎಂದರು.ಸಪ್ತಶ್ರೀ ಪ್ರತಿಕ್ರಿಯಿಸಿ, ಸ್ಥಳಕ್ಕೆ ಇಂಜಿನಿಯರ್ ಕರೆಯಿಸಿ ಪರಿಹಾರ ಕಂಡುಕೊಳ್ಳಿ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಸರಿಪಡಿಸಬೇಕು. ಕುಡಿಯುವ ನೀರಿನ ಪೈಪ್‌ಲೈನ್ ಸರಿಪಡಿಸಿ, ನೀರು ಪೋಲಾಗದಂತೆ ತಡೆಯಬೇಕು. ನೀರಿಲ್ಲದ ಬಡಾವಣೆಗಳಿಗೆ ವಾರಗಟ್ಟಲೆ ಕಾಯಿಸದೆ ನಿಗದಿತ ಸಮಯಕ್ಕೆ ನೀರು ವಿತರಣೆಯಾಗಬೇಕು ಎಂದು ಹೇಳಿದರು. ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದೀಶ್ ಮಾತನಾಡಿ, ಈಗಾಗಲೇ ಕಲ್ಲೇಗೌಡನಪಾಳ್ಯದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಿ ಸುಮಾರು ಎರಡು ಸಾವಿರ ರಾಸುಗಳಿಗೆ ೧೯ಟನ್ ಮೇವನ್ನು ವಿತರಿಸಲಾಗಿದೆ. ಹೊನ್ನವಳ್ಳಿ ಭಾಗದ ರೈತರಿಗೆ ಮೇವು ಬ್ಯಾಂಕ್ ದೂರವಿರುವ ಕಾರಣ ಬಾಗುವಾಳದ ಮುನಿಯಪ್ಪ ಸ್ವಾಮಿ ಆಲದಮರದ ಬಳಿ ಮತ್ತೊಂದು ಮೇವು ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ ನಮಗೆ ಸಿಬ್ಬಂದಿಗಳ ಕೊರತೆ ಇದ್ದು ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಕೇಶವಮೂರ್ತಿ ಮಾತನಾಡಿ, ತಾಲೂಕಿನಲ್ಲಿ ೧೨೮ ಮಿ.ಮೀ ಮಳೆಯಾಗಿದ್ದು, ಬಿತ್ತನೆ ಬೀಜಗಳಾದ ಹೆಸರು ಕಾಳು, ಅಲಸಂದೆ, ಉದ್ದು, ತೊಗರಿ ಮತ್ತು ರಸಗೊಬ್ಬರವನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಸಪ್ತಶ್ರೀ ಪ್ರತಿಕ್ರಿಯಿಸಿ, ಬಿತ್ತನೆ ಬೀಜಗಳು ಬಿತ್ತನೆಯಾಗಬೇಕು. ನಮ್ಮ ಉಪವಿಭಾಗದಲ್ಲಿ ಹೆಚ್ಚು ಬಿತ್ತನೆಯಾಗಿ ಇಳುವರಿ ಬರುವಂತೆ ನೋಡಿಕೊಳ್ಳಬೇಕು. ರೈತರನ್ನು ಪ್ರೋತ್ಸಾಹಿಸುವಂತಹ ಕೆಲಸವನ್ನು ಮೂರು ತಾಲೂಕಿನ ಕೃಷಿ ಅಧಿಕಾರಿಗಳು ಮಾಡಬೇಕಿದೆ ಎಂದರು.ತಹಸೀಲ್ದಾರ್ ಪವನ್‌ಕುಮಾರ್, ಗ್ರಾಮೀಣ ಕುಡಿಯುವ ನೀರಿನ ಕಾರ್ಯನಿರ್ವಾಹಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ನಿರ್ದೇಶಕ ಚಂದ್ರಶೇಖರ್ ಸೇರಿದಂತೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕಿನ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿ ತಮ್ಮ ತಾಲೂಕುಗಳಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.