ಗುಲಾಬಿ ಮೆಟ್ರೋ ಮಾರ್ಗ ಚೌಕಾಕಾರ ಸುರಂಗ!

| Published : May 31 2024, 02:16 AM IST / Updated: May 31 2024, 05:22 AM IST

ಸಾರಾಂಶ

ಬಾಕ್ಸ್‌ ಪುಶಿಂಗ್‌ ಟೆಕ್ನಾಲಜಿ ಬಳಸಿ, ಟಿಬಿಎಂನಿಂದ ವೃತ್ತಾಕಾರದ ಸುರಂಗ ಕೊರೆಯದೆ, ಕಾಂಕ್ರೀಟ್‌ನ ಚೌಕಟ್ಟುಗಳನ್ನು ಅಳವಡಿಸಿ ‘ಗುಲಾಬಿ’ ಮಾರ್ಗದಲ್ಲಿ ಸುರಂಗ ರೂಪಿಸಲಾಗಿದೆ.

 ಬೆಂಗಳೂರು :  ನಮ್ಮ ಮೆಟ್ರೋದ ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ‘ಗುಲಾಬಿ’ ಮಾರ್ಗದಲ್ಲಿ ಮೊದಲ ಬಾರಿಗೆ ಚೌಕಾಕಾರದ ಸುರಂಗ ನಿರ್ಮಿಸಲಾಗಿದೆ. ಬಾಕ್ಸ್‌ ಪುಶಿಂಗ್‌ ಟೆಕ್ನಾಲಜಿ’ ಬಳಸಿ ಅಂದರೆ ಟಿಬಿಎಂನಿಂದ ವೃತ್ತಾಕಾರದ ಸುರಂಗ ಕೊರೆಯದೆ, ಕಾಂಕ್ರೀಟ್‌ನ ಚೌಕಟ್ಟುಗಳನ್ನು ಅಳವಡಿಸಿ ಸುರಂಗ ರೂಪಿಸಲಾಗಿದೆ.

ಒಟ್ಟಾರೆ 21 ಕಿ.ಮೀ. ಇರುವ ಈ ಮಾರ್ಗದಲ್ಲಿ 13 ಕಿ.ಮೀ. ಸುರಂಗ ಇರಲಿದ್ದು, ಕಾಮಗಾರಿ ಬಹುತೇಕ ಅಂತಿಮ ಘಟ್ಟ ತಲುಪಿದೆ. ನಾಗವಾರ ಅಂಡರ್‌ಗ್ರೌಂಡ್ ನಿಲ್ದಾಣದ ದಕ್ಷಿಣ ಭಾಗದಲ್ಲಿ ಸರ್ವಿಸ್ ರಸ್ತೆ ಮತ್ತು ಹೊರವರ್ತುಲ ಮೇಲ್ಸೇತುವೆಯ ಕೆಳಗೆ 77 ಮೀಟರ್ ಉದ್ದ ಸುರಂಗವನ್ನು ಈ ರೀತಿ ಚೌಕಾಕಾರವಾಗಿ ನಿರ್ಮಿಸಲಾಗಿದೆ. ಇದಕ್ಕಾಗಿ ಎಂಟು ಬಾಕ್ಸ್‌ಗಳನ್ನು ಬಳಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಮೆಟ್ರೋ ಸುರಂಗವನ್ನು ಟನಲ್ ಬೋರಿಂಗ್ ಮಷಿನ್ ಮೂಲಕ ವೃತ್ತಾಕಾರವಾಗಿ ಕೊರೆಯಲಾಗುತ್ತಿತ್ತು. ಈಗಿನ ‘ಬಾಕ್ಸ್ ಪುಶಿಂಗ್ ತಂತ್ರಜ್ಞಾನ‘ದಿಂದ ರೂಪಿಸಿದ ಸುರಂಗ ಚೌಕಾಕಾರದಲ್ಲಿ, ಬಾಕ್ಸ್ ರೀತಿಯಲ್ಲಿ ಕಾಣಿಸುತ್ತದೆ. ಮೆಟ್ರೋ ಕಾಮಗಾರಿಯಲ್ಲಿ ಇದೊಂದು ಹೊಸ ಪ್ರಯತ್ನವಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಮೇಲ್ಸೇತುವೆ ಇರುವುದರಿಂದ ಹಾಗೂ ಅದರ ಕೆಳಭಾಗದ ವೈರ್‌, ಕೇಬಲ್‌ಗಳ ಸ್ಥಳಾಂತರ ಮಾಡುವುದನ್ನು ತಪ್ಪಿಸಲು ಚೌಕಾಕಾರದ ಸುರಂಗ ನಿರ್ಮಿಸಲಾಗಿದೆ. ಜೊತೆಗೆ ಚೌಕ ಸುರಂಗದೊಳಗೆ ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಸೌಲಭ್ಯ ಅಳವಡಿಸಲು ಸಾಕಷ್ಟು ಸ್ಥಳ ಸಿಗುವ ಕಾರಣಕ್ಕಾಗಿ ಈ ಮಾದರಿಯ ಸುರಂಗ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೆಟ್ರೋ ಗುಲಾಬಿ ಮಾರ್ಗ 2025ರಲ್ಲಿ ಪೂರ್ಣಗೊಳಿಸಲಾಗುತ್ತದೆ. ಎಂ.ಜಿ.ರಸ್ತೆ ನಿಲ್ದಾಣ ಈಗಿನ ನೇರಳೆ ಮಾರ್ಗ ಹಾಗೂ ಗುಲಾಬಿ ಮಾರ್ಗದ ನಡುವಣ ಇಂಟರ್‌ಚೇಂಜ್‌ ಆಗಿ ಬಳಕೆಯಾಗಲಿದೆ.