ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರಿದೇವಿ-ಭೂದೇವಿ ಕಲ್ಯಾಣ ನಾಯಕಿಯರೊಡನೆ ರಥಾರೂಡನಾದ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಎಸೆದು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೊತ್ಸವದ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರಿದೇವಿ-ಭೂದೇವಿ ಕಲ್ಯಾಣ ನಾಯಕಿಯರೊಡನೆ ರಥಾರೂಡನಾದ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಎಸೆದು ಸಂಭ್ರಮಿಸಿದರು.

ರಥೋತ್ಸವಕ್ಕೂ ಮುನ್ನ ನಡೆದ ಉತ್ಸವದಲ್ಲಿ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಭಾಗವಹಿಸಿದ್ದರು. ಮಹಾರಥಕ್ಕೆ ಮಧ್ಯಾಹ್ನ 12-30ರ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವರ ಪುತ್ರ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮತ್ತಿತರ ಅಧಿಕಾರಿಗಳು ತೆಂಗಿನಕಾಯಿ ಒಡೆದು ರಥದ ಚೈನ್‌ ಎಳೆಯುವ ಮೂಲಕ ಚಾಲನೆ ನೀಡಿದರು. ರಥೋತ್ಸವ ಚಾಲನೆ ವೇಳೆ ಆಕಾಶದಲ್ಲಿ ಕಾಣಿಸಿಕೊಂಡ ಗರುಡಪಕ್ಷಿಗಳು ಪ್ರದಕ್ಷಿಣೆ ಹಾಕಿದ್ದು ಭಕ್ತರಲ್ಲಿ ಸಂಭ್ರಮೋಲ್ಲಾಸ ಉಂಟುಮಾಡಿ ಶುಭಸೂಚನೆ ನೀಡಿತು. ಭಕ್ತರ ಜಯಘೋಷದೊಂದಿಗೆ ಮಾರಿಗುಡಿಬೀದಿ, ರಾಜಬೀದಿಗಳಲ್ಲಿ ಸಾಗಿದ ಮಹಾರಥ 1.40ರ ವೇಳೆಗೆ ದೇವಾಲಯದ ರಾಜಗೋಪುರದ ಬಳಿ ನೆಲೆನಿಂತಿತು.

ಅಲ್ಲಿ ದೇವಾಲಯದಿಂದ ಪೂಜೆ ನೆರವೇರಿದ ನಂತರ ವಾನಮಾಮಲೈ ಬೀದಿ ರಥದ ಬೀದಿಯಲ್ಲಿ ಸಾಗಿದ ಬೃಹತ್‌ರಥ 3 ಗಂಟೆ ವೇಳೆಗೆ ಸ್ವಸ್ಥಾನ ಥದಮಂಟಪಕ್ಕೆ ತಲುಪಿತು. ದೇವಾಲಯದ ಶ್ರೀಪಾದದವರು, ಬಂಡೀಕಾರರು, ಗ್ರಾಮದ ಯುವಕರು ಮಹಾರಥ ಸಗಮ ಚಾಲನೆಗೆ ಶ್ರಮಿಸಿ ರಥೋತ್ಸವ ಯಶಸ್ವಿಗೊಳಿಸಿದರು.

ಮಹಾರಥೋತ್ಸವದಲ್ಲಿ ಪಾಂಡವಪುರ ಉಪವಿಬಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಬಸವರಾಜ ರೆಡ್ಡಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶ್‌ಗೌಡ, ಮತ್ತು ಸದಸ್ಯರು ದೇವಾಲಯದ ಇಒ ಶೀಲಾ ಶಾಸಕರ ಸಹೋದರ ರಾಘವಪ್ರಕಾಶ್‌ಇದ್ದರು. ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ. ಎಂಎನ್ ಪಾರ್ಥಸಾರಥಿ ರಥೋತ್ಸವದ ಯಶಸ್ಸಿಗೆ ಶ್ರಮಿಸಿದ್ದರು. ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು ಸಹ ಆಗಮಿಸಿ ದೇವರ ದರ್ಶನ ಪಡೆದರು.

ಇದಕ್ಕೂ ಬೆಳಗ್ಗೆ ಮಹಾರಥೋತ್ಸವ ಕಾರ್ಯಕ್ರಮಗಳು ಆರಂಭವಾಗಿ 8.30ಕ್ಕೆ ರಥಬಲಿ ಪೂರೈಸಿ ನಂತರ ಯಾತ್ರಾದಾನ ಕೈಗೊಳ್ಳಲಾಯಿತು. ರಾಮಾನುಜಾಚಾರ್ಯರೊಂದಿಗೆ ಶ್ರೀದೇವಿ ಭೂದೇವಿ ಕಲ್ಯಾಣನಾಯಕಿ ಅಮ್ಮನವರೊಂದಿಗೆ ವಜ್ರಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ವಿಶೇಷಮಂಗಳವಾದ್ಯ ಹಾಗೂ ವೇದಘೋಷದೊಂದಿಗೆ ರಥದ ಮಂಟಪದ ಬಳಿಗೆ ಸಾಗಿ ಮೂರು ಪ್ರದಕ್ಷಿಣೆ ಹಾಕಿ ಮಹೂರ್ತಪಠಣೆಯ ನಂತರ ರಥಾರೋಹಣ ನಡೆಯಿತು.

ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕವೇದಿಕೆ ವತಿಯಿಂದ ಯತಿರಾಜದಾಸರ್ ಗುರುಪೀಠದಿಂದ ನಡೆಯುತ್ತಿರುವ 11ನೇ ವರ್ಷದ ನಾದೋಪಾಸನ ಸೇವೆಯಡಿ ವಿದ್ವಾನ್ ಆನಂದಕುಮಾರ್ ತಂಡ ವಿಶೇಷ ನಾದಸ್ವರ ಕೈಂಕರ್ಯ ನಡೆಸಿದರು. ಮಹಾರಥೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿ ಮೇಲುಕೊಟೆ ಪ್ರಮುಖಬೀದಿಗಳಲ್ಲಿ ರಥದರ್ಶನಕ್ಕೆ ಕಾಯುತ್ತಿದ್ದ ದೃಶ್ಯಕಂಡು ಬಂತು ಸರ್ಕಲ್ ಇನ್ಸ್‌ಪೆಕ್ಟರ್ ಶರತ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಭದ್ರತೆ ನೀಡಿದ್ದರು.

ಗಮನ ಸೆಳೆದ ಬಾಳೆಹಣ್ಣಿನ ಮೇಲೆ ಬರೆದ ಪ್ರಾರ್ಥನೆ:

ಎರಡು ಹೆಣ್ಣು ಮಕ್ಕಳಿರುವ ನಮ್ಮ ತಂದೆತಾಯಿಯನ್ನು ಕಾಪಾಡು ಭಗವಂತ ಎಂದು ಹೆಣ್ಣುಮಗಳೊಬ್ಬಳು ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಸಮರ್ಪಿಸಿದ್ದನ್ನು ನೋಡಿ ಅಧಿಕಾರಿಗಳ ಮನಸ್ಸು ಕಲಕಿತು. ಭಗವಂತ ಆ ಹೆಣ್ಣುಮಗುವಿನ ಪ್ರಾರ್ಥನೆ ಈಡೇರಿಸಪ್ಪ ಎಂದರು. ಕೆಲವು ಭಕ್ತರು ಮದುವೆಗೆ ವಧು ಕರುಣಿಸು, ಸಾಲದಿಂದ ಮುಕ್ತಿಮಾಡು, ಆರೋಗ್ಯ ಕರುಣಿಸುವ ತಂದೆ ತಾಯಿಯನ್ನು ಕಾಪಾಡು ಹೆಚ್ಚಿನ ಅಂಕ ಕರುಣಿಸಿ ಆರ್.ಸಿ.ಬಿ ವಿಜಯಶಾಲಿಯನ್ನಾಗಿ ಮಾಡು ಎಂದು ಬಾಳೆಹಣ್ಣುಗಳ ಮೇಲೆ ಬರೆದು ದವನದೊಂದಿಗೆ ರಥಕ್ಕೆಸೆದು ಚೆಲುವನಾರಾಯಣಸ್ವಾಮಿಯ ಮೊರೆ ಹೊಗಿದ್ದರು.

ಭಕ್ತರ ಮೊರೆಯನ್ನು ಆಲಿಸಿ ಒಳಿತನ್ನು ಮಾಡುತ್ತಾನೆ ಎಂದು ಅರ್ಚಕರು ಹಾರೈಸಿದರು. ಪ್ರ ತಿದಿನ ಸುಡುಬಿಸಿಲಿನ ವಾತಾವರಣವಿರುತ್ತಿದ್ದ ಮೇಲುಕೋಟೆಯಲ್ಲಿ ಇಂದು ಬಿಸಿಲಿನ ತಾಪ ಕಡಿಮೆಯಾಗಿ ಮೋಡಕವಿದ ವಾತಾವರಣ ಇದ್ದು, ಭಕ್ತರಲ್ಲಿ ನೆಮ್ಮದಿ ಮೂಡಿಸಿತ್ತು. ತೇರೆಳೆಯವ ಭಕ್ತರ ದಾಹ ತಣಿಸಲು ಯತಿರಾಜದಾಸರ್ ಗುರುಪೀಠ ಹಾಗೂ ಚಿನ್ನಜೀಯರ್ ಮಠದವತಿಯಿಂದ ಮಜ್ಜಿಗೆ ಪಾನಕ ನೀಡಲಾಯಿತು.

ನಾದಸ್ವರ ನುಡಿಸಿದವರಿಗೆ ಉತ್ಸಾಹ ತುಂಬಿದ ಶಾಸಕ:

ಚಲುವನಾರಾಯಣಸ್ವಾಮಿ ಮಹಾರಥೋತ್ಸವದಲ್ಲಿ ನಾದೋಪಾಸನ ಸೇವೆಯಲ್ಲಿ ಪಾಲ್ಗೊಂಡು ನಾದಸ್ವರ ನುಡಿಸುತ್ತಿದ್ದ ವಿದ್ವಾನ್ ಆನಂದ್ ತಂಡವರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉತ್ಸಾಹ ತುಂಬಿದರು.

ಕಲಾವಿದರೊಂದಿಗೆ ಭಾಗಿಯಾದ ಶಾಸಕರು ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆಯಡಿ ಚೆಲುವನಾರಾಯಣಸ್ವಾಮಿಗೆ ಸಂಗೀತ ಸೇವೆ ಮಾಡುವ ಮೂಲಕ ನಿಜವಾದ ಕೈಂಕರ್ಯ ಮಾಡುತ್ತಿದ್ದೀರಿ. ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಹಾರೈಸಿದರು.

ಈ ವೇಳೆ ದೇವಾಲಯದ ವ್ಯವಸ್ಥಾಪನಾಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್‌ಗೌಡಇದ್ದರು. ನಾದಸ್ವರ ವಾದನದಲ್ಲಿ ಆಕಾಶವಾಣಿ ಮತ್ತು ದೂರದರ್ಶನದ ಎಗ್ರೇಡ್ ಕಲಾವಿದ ವಿದ್ವಾನ್ ಆನಂದ್, ಎಂ.ಆರ್ ಕೃಷ್ಣ, ಎಂ.ಎಸ್ ಗೌತಮ. ಎಂಬಿ ಅಭಿಲಾಶ್ ನಾದಸ್ವರ ನುಡಿಸಿದರೆ ಅಶೋಕ್ ಕುಮಾರ್, ಗೋವರ್ಧನ, ಪ್ರೀತಮ್ ಡೋಲು ನುಡಿಸಿದರು.