ಸಾರಾಂಶ
ಶ್ರೀ ಶನೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಹೂವುಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ ೧೧.೩೦ರ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಆ ವೇಳೆಗೆ ಮಹಿಳೆಯರು ದೇವರಿಗೆ ಆರತಿ ಬೆಳಗಲು ದೇವಸ್ಥಾನದ ಎರಡೂ ಕಡೆಗಳಲ್ಲಿ ಸಿದ್ಧರಾಗಿ ನಿಂತಿದ್ದರು. ವೀರಗಾಸೆ ಕುಣಿತದ ಜೊತೆ ರಥೋತ್ಸವ ಬರುತ್ತಿದ್ದಂತೆ ಹಣ್ಣು, ಹೂವು, ಜವನವನ್ನು ದೇವರಿಗೆ ಎಸೆದು ಈಡುಗಾಯಿ ಒಡೆದರು.
ಕನ್ನಡಪ್ರಭ ವಾರ್ತೆ ಮಂಡ್ಯ
ರಥಸಪ್ತಮಿ ಅಂಗವಾಗಿ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಶ್ರೀಶನೇಶ್ವರಸ್ವಾಮಿ ದಿವ್ಯ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಮುಂಜಾನೆಯಿಂದಲೇ ಶ್ರೀಶನೇಶ್ವರಸ್ವಾಮಿ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಬಡಾವಣೆಯ ನಿವಾಸಿಗಳು ಮನೆಯ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸಿ ಶುಚಿರ್ಭೂತರಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಧನ್ಯತಾಭಾವ ಮೆರೆದರು. ಬೆಳಗ್ಗೆಯಿಂದಲೇ ರಥವನ್ನು ವಿವಿಧ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಶ್ರೀ ಶನೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಹೂವುಗಳಿಂದ ಅಲಂಕರಿಸಲಾಗಿತ್ತು.
ಮಧ್ಯಾಹ್ನ ೧೧.೩೦ರ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಆ ವೇಳೆಗೆ ಮಹಿಳೆಯರು ದೇವರಿಗೆ ಆರತಿ ಬೆಳಗಲು ದೇವಸ್ಥಾನದ ಎರಡೂ ಕಡೆಗಳಲ್ಲಿ ಸಿದ್ಧರಾಗಿ ನಿಂತಿದ್ದರು. ವೀರಗಾಸೆ ಕುಣಿತದ ಜೊತೆ ರಥೋತ್ಸವ ಬರುತ್ತಿದ್ದಂತೆ ಹಣ್ಣು, ಹೂವು, ಜವನವನ್ನು ದೇವರಿಗೆ ಎಸೆದು ಈಡುಗಾಯಿ ಒಡೆದರು. ದೇವರಿಗೆ ಆರತಿ ಬೆಳಗುವುದರೊಂದಿಗೆ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ನಂತರ ಹಲವು ಮಹಿಳೆಯರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತೀರ್ಥ, ಪ್ರಸಾದ ಸ್ವೀಕರಿಸಿದರು.ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ ಸಾಗಿತು. ರಥ ಬರುವ ರಸ್ತೆಗಳಲ್ಲಿ ಮಹಿಳೆಯರು ನೀರು ಹಾಕಿ ರಂಗೋಲಿ ಬಿಡಿಸಿದ್ದರು. ಮಧ್ಯಾಹ್ನ ೨ ಗಂಟೆಯವರೆಗೂ ರಥೋತ್ಸವ ನಡೆದು ದೇವಸ್ಥಾನಕ್ಕೆ ಮರಳುವುದರೊಂದಿಗೆ ಅಂತ್ಯಗೊಂಡಿತು. ರಥೋತ್ಸವದ ಅಂಗವಾಗಿ ಮಧ್ಯಾಹ್ನ ೧೨ ಗಂಟೆಗೆ ದೇವಾಲಯದ ಪಕ್ಕದಲ್ಲಿರುವ ಬಯಲು ರಂಗಮಂದಿರದ ಬಳಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬಡಾವಣೆಯ ನಿವಾಸಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.