ವಿಜೃಂಭಣೆಯಿಂದ ನಡೆದ ಶ್ರೀಸೋಮನಹಳ್ಳಿ ಅಮ್ಮನವರ ಬ್ರಹ್ಮರಥೋತ್ಸವ

| Published : Feb 24 2025, 12:33 AM IST

ಸಾರಾಂಶ

ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ಅಂಕುರಾರ್ಪಣೆ, ಪಂಚಾಮೃತಾಭಿಷೇಕ, ದನಗಳ ಜಾತ್ರೆ, ಬಿಸಿಲು ಕೊಂಡೋತ್ಸವ, 101 ಮಡೆ ಆರತಿ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ 1.45ಕ್ಕೆ ಶ್ರೀ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯ ಬ್ರಹ್ಮ ರಥೋತ್ಸವದ ಮೂಲಕ ಕಳೆದ 10 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ಅಂಕುರಾರ್ಪಣೆ, ಪಂಚಾಮೃತಾಭಿಷೇಕ, ದನಗಳ ಜಾತ್ರೆ, ಬಿಸಿಲು ಕೊಂಡೋತ್ಸವ, 101 ಮಡೆ ಆರತಿ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ 1.45ಕ್ಕೆ ಶ್ರೀ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ನೆರೆದಿದ್ದ ಸಹಸ್ರಾರು ಮಂದಿ ಭಕ್ತರು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ರಥೋತ್ಸವದ ಬಳಿಕ ದೇವಸ್ಥಾನದಲ್ಲಿ ಸಂಜೆವರೆಗೂ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸಿ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು.

ದೇವಿ ಮೂಲ ಸ್ಥಾನ ಚಿಣ್ಯ ಸೇರಿದಂತೆ, ಹೊಣಕೆರೆ, ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಜಿಲ್ಲೆ ಮತ್ತು ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹ್ರಾರು ಭಕ್ತರು ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾಗಿ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ತುರುವೇಕೆರೆಯ ಗೀತಾ ಮತ್ತು ರಾಜಣ್ಣ ದಂಪತಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು

ಸನ್ನಿಧಿಯ ಶ್ರೀ ಕೋಟೆಮಾರಮ್ಮದೇವಿ ಮತ್ತು ಶ್ರೀ ಆಂಜನೇಯಸ್ವಾಮಿ, ಶ್ರೀದೊಡ್ಡಮ್ಮ ಹಾಗೂ ಶ್ರೀಚಿಕ್ಕಮ್ಮದೇವಿ ದೇವಾಲಯಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ರಥೋತ್ಸವದ ಬಳಿಕ ವಡ್ಡರಹಳ್ಳಿ ಗ್ರಾಮಸ್ಥರಿಂದ ವಸಂತೋತ್ಸವ ನಡೆಯಿತು. ಅವಭೃತಾಮೃತ ಮತ್ತು ಅಶ್ವಾರೋಹಣ ಸೇವೆ ನಂತರ ದೇವಿಯನ್ನು ಕಟ್ಟೆಮನೆ ಚಿಣ್ಯದ ಮೂಲಸ್ಥಾನಕ್ಕೆ ಕರೆದೊಯ್ಯಲಾಯಿತು. ಆ ಮೂಲಕ ಕಳೆದ ಹತ್ತು ದಿನಗಳಿಂದ ನಡೆದ ಜಾತ್ರಾಮಹೋತ್ಸವಕ್ಕೆ ತೆರೆಬಿದ್ದಿತು.

ಉತ್ತಮ ರಾಸುಗಳಿಗೆ ಬಹುಮಾನ:

ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ದನಗಳ ಜಾತ್ರೆಯಲ್ಲಿ 40ಕ್ಕೂ ಹೆಚ್ಚು ಜೊತೆ ಹಳ್ಳಿಕಾರ್ ತಳಿಯ ರಾಸುಗಳು ಪಾಲ್ಗೊಂಡಿದ್ದವು. ಈ ಪೈಕಿ ಉತ್ತಮ ರಾಸುಗಳನ್ನು ಆಯ್ಕೆ ಮಾಡಿ ಗೆಜ್ಜೆಹೊಸಹಳ್ಳಿ ವೆಂಕಟೇಶ್‌ಗೆ ಪ್ರಥಮ, ಕೆಮ್ಮನಹಳ್ಳಿ ಗ್ರಾಮದ ನಾಗೇಶ್‌ಗೆ ದ್ವಿತೀಯ, ಗೆಜ್ಜೆಹೊಸಹಳ್ಳಿ ಗ್ರಾಮದ ಯೋಗೇಶ್‌ಗೆ ತೃತೀಯ ಬಹುಮಾನ ನೀಡಲಾಯಿತು.

ಇದಲ್ಲದೇ, ಉತ್ತಮ ತಳಿಯ ಬಿತ್ತನೆ ಹೋರಿಯನ್ನು ಗುರುತಿಸಿ ಅಲ್ಪಹಳ್ಳಿ ಗ್ರಾಮದ ಪುನಿತ್‌ಕುಮಾರ್ ಅವರಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಇನ್ನುಳಿದ 35ಕ್ಕೂ ಹೆಚ್ಚು ರಾಸುಗಳ ಮಾಲೀಕರಿಗೆ ಸಮಾಧಾಕರ ಬಹುಮಾನ ನೀಡಿ ರೈತರನ್ನು ಪ್ರೋತ್ಸಾಹಿಸಲಾಯಿತು.