ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿಯ ಚಿಕ್ಕೋನಹಳ್ಳಿ ಗ್ರಾಮದ ಶ್ರೀ ಅಮರಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಶ್ರೀ ರಾಮನವಮಿಯಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಪ್ರತಿವರ್ಷದಂತೆ ಈ ವರ್ಷವೂ ಶ್ರೀ ರಾಮನವಮಿ ದಿನದಂದು ಬ್ರಹ್ಮ ರಥೋತ್ಸವ ನಡೆದುಕೊಂಡು ಬರುತ್ತಿದೆ ಬೆಳಗ್ಗೆಯಿಂದಲೇ ಮೂಲ ಪುರಾಣ ಪ್ರಸಿದ್ಧ ಗುಡ್ಡದ ಅಮರಗಿರಿ ರಂಗನಾಥ ಸ್ವಾಮಿ ಮತ್ತು ಗ್ರಾಮದಲ್ಲಿರುವ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಬೆಂಗಳೂರು ಸೇರಿದಂತೆ ಈ ಭಾಗದ ಚನ್ನರಾಯಪಟ್ಟಣ ತಿಪಟೂರು, ನುಗ್ಗೇಹಳ್ಳಿ, ಬಾಗೂರು, ಅಮರಗಿರಿ ಚಿಕ್ಕೋನಹಳ್ಳಿ, ದೇವಲಾಪುರ, ಹುಲ್ಲೇನಹಳ್ಳಿ, ನರೇನಹಳ್ಳಿ, ರಾಂಪುರ, ಚಿಕ್ಕೋನಳ್ಳಿ ಗೇಟ್, ಅಗ್ರಹಾರ ಬೆಳಗುಲಿ ಸೇರಿದಂತೆ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.ಗ್ರಾಮದ ರಾಜಬೀದಿಗಳಲ್ಲಿ ದೇವರ ಉತ್ಸವದೊಂದಿಗೆ ರಥದ ಸುತ್ತ ಉತ್ಸವ ಮೂರ್ತಿಯ ಪ್ರದಕ್ಷಿಣೆಯೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳು ನೆರವೇರಿದ ನಂತರ ಶಾಸಕ ಸಿ ಎನ್ ಬಾಲಕೃಷ್ಣ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಭಕ್ತರು ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು ರಥೋತ್ಸವದ ಅಂಗವಾಗಿ ಮಾರ್ಚ್‌ 25ರಿಂದ 28ರವರೆಗೆ ಪ್ರತಿದಿನ ವಿವಿಧ ಉತ್ಸವಗಳು ಹಾಗೂ ಪೂಜಾ ಕಾರ್ಯಕ್ರಮಗಳನ್ನು ನಡೆಯುತ್ತಿವೆ ನಂದಿ ಧ್ವಜ ಕುಣಿತ ವೀರಭದ್ರನ ಕುಣಿತ ವೀರಗಾಸೆ ಕುಣಿತ ಏರ್ಪಡಿಸಲಾಗಿತ್ತು.ರಥೋತ್ಸವದ ಅಂಗವಾಗಿ ಭಕ್ತರಿಗೆ ಪಾನಕ ಸೇವೆ ಮತ್ತು ಅನ್ನದಾಸ್ತೋಹ ಸೇವೆ ನಡೆಯಿತು. ಶುಕ್ರವಾರ ರಾತ್ರಿ ಮಕ್ಕಳಿಂದ ಚಿನ್ನರ ಲೋಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಿಸಿಲನ ನಡುವೆಯೂ ಉತ್ಸಾಹದಿಂದ ಪಾಲ್ಗೊಂಡ ಭಕ್ತರು : ಮಧ್ಯಾಹ್ನದ ವೇಳೆಗೆ ಬಿಸಿಲ ತಾಪವು ಹೆಚ್ಚಾದಂತೆ ಬರಿಗಾಲಲ್ಲಿ ರಸ್ತೆಯಲ್ಲಿ ನಡೆಯುವುದೇ ಕಷ್ಟವಾಗಿತ್ತು ಜೊತೆಗೆ ಬಿಸಿಲಲ್ಲಿ ಗಂಟಗಟ್ಟಲೆ ನಿಂತುಕೊಂಡು ಬಿಸಿಲನ್ನು ಲೆಕ್ಕಿಸದೆ ರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.ರಥೋತ್ಸವದಲ್ಲಿ ಶಾಸಕ ಸಿಎನ್ ಬಾಲಕೃಷ್ಣ, ತಹಸೀಲ್ದಾರ್‌ ಜಿ ಎಸ್ ಶಂಕರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಕಂದಾಯ ಅಧಿಕಾರಿ ರಾಜ್ ಪ್ರೇಮ್, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ, ದೇವಾಲಯದ ಪ್ರಧಾನ ಅರ್ಚಕ ಶ್ರೀಕಾಂತ್ ಸಿವೈ, ಆಗಮಿಕರಾದ ಕಾರೇಹಳ್ಳಿ ಕಿರಣ್ ಕುಮಾರ್, ದೇವಾಲಯದ ಎಲ್ಲಾ ಅರ್ಚಕರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು, ಸದಸ್ಯರು ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ದೇವರ ಒಕ್ಕಲು ಭಕ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.