ಸಾರಾಂಶ
ಹೊಸಕೋಟೆ: ನಗರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಪೂಜೆ ಸಲ್ಲಿಸುವ ಮೂಲಕ ಸಂಪನ್ನವಾಯಿತು.
ಸೋಮವಾರ ಬೆಳಿಗ್ಗೆ ೧೨ ಗಂಟೆಗೆ ಶ್ರೀ ಅವಿಮುಕ್ತೇಶ್ವರ ದೇವಾಲಯದಲ್ಲಿ ಉತ್ಸವ ಮುರ್ತಿಗಳಿಗೆ ಶ್ರದ್ಧಾಭಕ್ತಿಯಿಂದ ಶಾಸಕ ಶರತ್ ಬಚ್ಚೇಗೌಡ, ಸಂಚಾಲಕ ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್ ಪೂಜೆ ಸಲ್ಲಿಸುವ ಮೂಲಕ ತಾಲೂಕು ಕಚೇರಿ ಮುಂದೆ ಮಧ್ಯಾಹ್ನ ೧.೦೫ಕ್ಕೆ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ಬಳಿಕ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅವಿಮುಕ್ತೇಶ್ವರ ಭ್ರಹ್ಮರಥೋತ್ಸವ ಹಾಗೂ ದ್ರೌಪದಮ್ಮ ಕರಗೋತ್ಸವ ಸೇರಿ ಆಚರಿಸುವ ಹಬ್ಬವಾಗಿದ್ದು 1904ರಿಂದ ಹೊಸಕೋಟೆಯಲ್ಲಿ ನಿರಂತರವಾಗಿ ಆಚರಿಸಲಾಗುತ್ತಿದೆ. ರಥೋತ್ಸವ ತನ್ನದೇ ಆದ ಐತಿಹ್ಯ ಹೊಂದಿದ್ದು ಮುಂದಿನ ವರ್ಷ ಹೊಸ ರಥ ನಿರ್ಮಿಸಿ ಹಬ್ಬ ಆಚರಿಸಲಿದ್ದೇವೆ. ಈಗಾಗಲೆ 60 ಲಕ್ಷ ವೆಚ್ಚದಲ್ಲಿ ರಥಕ್ಕೆ ಮರದ ತುಂಡುಗಳನ್ನು ಹುಣಸೂರಿನಿಂದ ತರಲಾಗಿದೆ ಎಂದರು.
ಸಾವಿರಾರು ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯುವಕರು, ಹಿರಿಯರು, ಮಹಿಳೆಯರು ತೇರಿಗೆ ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ವೀರಗಾಸೆ, ಡೊಲ್ಲುಕುಣಿತ, ಬೊಂಬೆ ಕುಣಿತ ಸೇರಿದಂತೆ ಹಲವು ರೀತಿಯ ಕಲಾ ತಂಡಗಳು ವಿವಿಧ ತಮಟೆ ವಾದ್ಯಗಳು ಭಾಗವಹಿಸಿದ್ದವು.ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ಬ್ರಹ್ಮರಥೋತ್ಸವ ಉಸ್ತುವಾರಿ ಸಮಿತಿ ಕಾರ್ಯದರ್ಶಿ ಗಾಯತ್ರಿ ವಿಜಯ್ ಕುಮಾರ್, ಸದಸ್ಯರಾದ ಎನ್.ಮುನಿರಾಜ್, ಸುಭಾಷ್, ರಮೇಶ್ ಬಾಬು, ನಾರಾಯಣಸ್ವಾಮಿ, ಎಚ್.ಜಿ.ಸುನಿಲ್, ಗೋಪಾಲಕೃಷ್ಣ, ಶಾಂತಕುಮಾರ್, ಶಿವಾಜಿರಾವ್, ಉದಯ್ ಕುಮಾರ್, ಪ್ರದೀಪ್, ಅನೂಪ್‌ಗೌಡ, ನವಾಜ್, ಸುರೇಶ್ ಇತರರಿದ್ದರು.
ಫೋಟೋ : 12 ಹೆಚ್‌ಎಸ್‌ಕೆ 1 ಮತ್ತು 21: ಹೊಸಕೋಟೆ ನಗರದಲ್ಲಿ ನಡೆದ ಇತಿಹಾಸ ಪ್ರಸಿದ್ದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
(ಪ್ಯಾನಲ್ ಫೋಟೋ )ಹೊಸಕೋಟೆ ನಗರದ ತಾಲೂಕು ಕಚೇರಿ ಮುಂದೆ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು. ರಥೋತ್ಸವದ ಸಂಚಾಲಕ ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್ ಇತರರಿದ್ದರು.