ಶ್ರೀಬಸವೇಶ್ವರಸ್ವಾಮಿ ಹುಲಿವಾಹನೋತ್ಸವ; ದನಗಳ ಮೆರವಣಿಗೆ

| Published : Oct 25 2025, 01:00 AM IST

ಸಾರಾಂಶ

ದೇವರ ಉತ್ಸವದ ಜತೆಯಲ್ಲಿ ಗ್ರಾಮದಲ್ಲಿ ಹಲವು ರೈತರು ಎತ್ತುಗಳನ್ನು ಅಲಂಕರಿಸಿ ಮೆರವಣೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಪೂಜಾಕುಣಿತ, ತಮಟೆ, ವಾದ್ಯವೃಂದ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.

ಪಾಂಡವಪುರ:

ತಾಲೂಕಿನ ಕೆಂಚನಹಳ್ಳಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ 96ನೇ ವರ್ಷದ ಶ್ರೀಬಸವೇಶ್ವರಸ್ವಾಮಿ ಹುಲಿವಾಹನೋತ್ಸವ ಹಾಗೂ ದನಗಳ ಮೆರವಣಿಗೆ ಉತ್ಸವವು ವಿಜೃಂಭಣೆಯಿಂದ ಶುಕ್ರವಾರ ಸಂಜೆ ನಡೆಯಿತು.

ಹಬ್ಬದ ಅಂಗವಾಗಿ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಶ್ರೀಬಸವೇಶ್ವರಸ್ವಾಮಿ ಹುಲಿವಾಹನ ಉತ್ಸವಕ್ಕೆ ಬಗೆಬಗೆ ಹೂಗಳಿಂದ ಅಲಂಕರಿಸಲಾಯಿತು. ನಂತರ ಹುಲಿವಾಹನೋತ್ಸವವನ್ನು ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹುಲಿವಾಹನೋತ್ಸವದಲ್ಲಿ ಅರಕೆ ಹೊತ್ತ ಮಹಿಳೆಯರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಭಕ್ತರು ಉತ್ಸವದ ಕೆಳಗಡೆ ಮಲಗಿ ಹರಕೆ ತೀರಿಸಿದರು. ದೇವರ ಉತ್ಸವದ ಜತೆಯಲ್ಲಿ ಗ್ರಾಮದಲ್ಲಿ ಹಲವು ರೈತರು ಎತ್ತುಗಳನ್ನು ಅಲಂಕರಿಸಿ ಮೆರವಣೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಪೂಜಾಕುಣಿತ, ತಮಟೆ, ವಾದ್ಯವೃಂದ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.

ನಂತರ ಗ್ರಾಮದ ಹೊರವಲಯದ ಶ್ರೀಬಸವೇಶ್ವರಸ್ವಾಮಿ ದೇವಸ್ಥಾನದ ಬಳಿಗೆ ತೆರಳಿ ವಿಜೃಂಭಣೆಯಿಂದ ಉತ್ಸವ ಮೆರೆಸಿದರು. ಭಕ್ತರು ಶ್ರೀಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಪ್ರದರ್ಶನ ಮಾಡಿದರು. ಬಳಿಕ ರಾತ್ರಿ ದೇವರಿಗೆ ವಿವಿಧ ಪೂಜೆಗಳು ಜರುಗಿದವು. ಸೋಮವಾರ ಸಂಜೆ ಗ್ರಾಮದಲ್ಲಿ ಹಲವು ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದವು. ಶ್ರೀಬಸವೇಶ್ವರಸ್ವಾಮಿ ಹುಲಿವಾಹನೋತ್ಸವ ಕೆಂಚನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಯಜಮಾನರು, ಮುಖಂಡರು ಭಾಗವಹಿಸಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು.

ಮೈಸೂರು ವಿವಿಯಿಂದ ಎನ್.ಶಿಲ್ಪಗೆ ಪಿಎಚ್‌.ಡಿ ಪದವಿ

ಶ್ರೀರಂಗಪಟ್ಟಣ:

ತಾಲೂಕಿನ ಪಾಲಹಳ್ಳಿ ನಾರಾಯಣ ಅವರ ಪುತ್ರಿ ಕು.ಎನ್.ಶಿಲ್ಪ ಅವರ ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಮಂಡ್ಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಹಾಗೂ ಮೌಲ್ಯಮಾಪನ ಕುಲಸಚಿವರಾದ ಡಾ.ಕೆ. ಯೋಗನರಸಿಂಹಜಾರಿ ರವರ ಮಾರ್ಗದರ್ಶನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು, ಒಂದು ಸಮಾಜ ಶಾಸ್ತ್ರೀಯ ಅಧ್ಯಯನ ವಿಶೇಷವಾಗಿ ಮಂಡ್ಯ ಜಿಲ್ಲೆಯನ್ನು ಅನುಲಕ್ಷಿಸಿ ಎಂಬ ವಿಷಯದ ಮೇಲೆ ಸಂಶೋಧನಾ ಅಧ್ಯಯನ ನಡೆಸಿ ಸಿದ್ಧಪಡಿಸಿ ಸಲ್ಲಿಸಲಾದ ಪ್ರೌಢ ಪ್ರಬಂಧಕ್ಕೆ ಮೈಸೂರು ವಿವಿಯು ಕು.ಎನ್.ಶಿಲ್ಪ ಅವರಿಗೆ ಡಾಕ್ಟರೇಟ್ ಪದವಿ ನೀಡಿದೆ.