ದೇವಸ್ಥಾನದ ಪಕ್ಕದ ಬೀದಿಯ ಮೂಲಕ ವಿವಿಧ ವಾದ್ಯ, ಮೇಳ, ತಾಳಗಳೊಂದಿಗೆ ನೆರೆದಿದ್ದ ಭಕ್ತರು ತೇರನ್ನು ಎಳೆದರು.

ಕಾರಟಗಿ/ ನವಲಿ: ತಾಲೂಕಿನ ಹುಳ್ಕಿಹಾಳ ಗ್ರಾಮದ ಆರಾಧ್ಯ ದೈವ ಶ್ರೀಚಾಮುಂಡೇಶ್ವರಿ ದೇವಿಯ ಮಹಾರಥೋತ್ಸವ ಬುಧವಾರ ಸಂಜೆ ಸಾವಿರಾರು ಸಂಖ್ಯೆಯ ಭಕ್ತರ ನಡುವೆ ಅದ್ಧೂರಿಯಾಗಿ ನಡೆಯಿತು.

ಗ್ರಾಮದ ದೇವತೆ ಶ್ರೀಚಾಮುಂಡೇಶ್ವರಿ ದೇವಿಯ ೫೩ನೇ ವರ್ಷದ ಜಾತ್ರಾಮಹೋತ್ಸವದ ನಿಮಿತ್ತ ಬುಧವಾರ ಸಂಜೆ ನೆರೆದಿದ್ದ ಸಾವಿರಾರು ಭಕ್ತರ ಹಷೋದ್ಘಾರ,ಜಯಘೋಷಣೆಗಳ ನಡುವೆ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದ ಮುಂದಿನ ಅಲಂಕೃತ ರಥಕ್ಕೆ ನಿಗದಿತ ಮುಹೂರ್ತಕ್ಕೆ ಅರ್ಚಕರು ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ದೇವಸ್ಥಾನದ ಪಕ್ಕದ ಬೀದಿಯ ಮೂಲಕ ವಿವಿಧ ವಾದ್ಯ, ಮೇಳ, ತಾಳಗಳೊಂದಿಗೆ ನೆರೆದಿದ್ದ ಭಕ್ತರು ತೇರನ್ನು ಎಳೆದರು. ನೆರೆದಿದ್ದ ಭಕ್ತ ಸಮೂಹ ಜಯಘೋಷ ಹಾಕುತ್ತಾ ಹೂವು,ಹಣ್ಣು ಎರಚಿ ಭಕ್ತಿಯ ಪರಕಾಷ್ಠೆ ಮೆರೆದರು. ರಸ್ತೆಯ ಎರಡು ಬದಿಯಲ್ಲಿ ನಿಂತ ಮಹಿಳೆಯರು ಮಕ್ಕಳು,ಯುವಕರು, ಯುವತಿಯರು ರಥಕ್ಕೆ ನಮಸ್ಕರಿಸಿ ದೇವಿಗೆ ಭಕ್ತಿ ಸಮರ್ಪಿಸಿದರು. ತೇರು ಪಾದಗಟ್ಟೆ ಮುಟ್ಟಿ ನಂತರ ಸ್ವಸ್ಥಾನಕ್ಕೆ ಬಂದು ತಲುಪಿತು.

ಇದಕ್ಕೂ ಮುನ್ನ ೫೩ನೇ ವರ್ಷದ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ದೇವಸ್ಥಾನದಲ್ಲಿ ವಿವಿಧ ಪೂಜೆ ನಡೆದವು. ಅಭಿಷೇಕ,ಎಲೆ ಪೂಜೆ, ಅಲಂಕಾರಗಳನ್ನು ಅರ್ಚಕರು ನೆರೆವೇರಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಮಹಿಳೆಯರಿಂದ ಉಚ್ಚಾಯ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಸರ್ವಸದಸ್ಯರು, ಗಣ್ಯರು, ಮುಖಂಡರು ಗ್ರಾಮಸ್ಥರು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸದ್ಭಕ್ತಾಧಿಗಳು,ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಾತ್ರೆ ನಿಮಿತ್ತ ಬುಧವಾರ ರಾತ್ರಿ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆದವು.