ನವರಾತ್ರಿ ಹಬ್ಬದ ಅಂಗವಾಗಿ ಪಾಂಡವಪುರ ತಾಲೂಕಿನ ಹುಲ್ಕೆರೆ ಗ್ರಾಮದ ಶ್ರೀಚಿಕ್ಕಮ್ಮ ತಾಯಿ ಕರಗ ಉತ್ಸವವು ವಿಜೃಂಭಣೆಯಿಂದ ನಡೆಯಿತು. ನವರಾತ್ರಿ ಹಬ್ಬದ ಕೊನೇ ದಿನ ನಡೆಯುವ ಚಿಕ್ಕಮ್ಮತಾಯಿ ಉತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಭಾಗವಹಿಸಿ ದೇವಿ ದರ್ಶನಪಡೆದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ನವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ಹುಲ್ಕೆರೆ ಗ್ರಾಮದ ಶ್ರೀಚಿಕ್ಕಮ್ಮ ತಾಯಿ ಕರಗ ಉತ್ಸವವು ವಿಜೃಂಭಣೆಯಿಂದ ನಡೆಯಿತು.ನವರಾತ್ರಿ ಹಬ್ಬದ ಕೊನೇ ದಿನ ನಡೆಯುವ ಚಿಕ್ಕಮ್ಮತಾಯಿ ಉತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಭಾಗವಹಿಸಿ ದೇವಿ ದರ್ಶನಪಡೆದರು.
ಕರಗ ಉತ್ಸವದ ಅಂಗವಾಗಿ ನಂಜನಗೂಡು ತಾಲೂಕಿನ ಮರಡಿಹುಂಡಿ ಗ್ರಾಮದ ಹೊಳೆಯಲ್ಲಿ ದೇವರ ಸ್ವಚ್ಛಗೊಳಿಸಿ ಹೋಮ-ಹವನ ನಡೆಸಿ ಬಳಿಕ ಹುಲ್ಕೆರೆ ಗ್ರಾಮದಲ್ಲಿರುವ ಶ್ರೀಚಿಕ್ಕಮ್ಮತಾಯಿ ದೇವಸ್ಥಾನದಲ್ಲಿ ಹೋಮ ನಡೆಸಿ ದೇವರಿಗೆ ಬಗೆಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ದೇವಸ್ಥಾನದ ಮುಂಭಾಗ ವೀರಮಕ್ಕಳಿಂದ ರಂಗಕುಣಿತ ನಡೆಸಿದರು. ಬಳಿಕ ಚಿಕ್ಕಮ್ಮ ತಾಯಿ ದೇವರ ಉತ್ಸವ ಮೂರ್ತಿಗೆ ಹೂವು ಹೊಂಬಾಳೆಗಳಿಂದ ಅಲಂಕರಿಸಿ ವೀರಗಾಸೆ ಕುಣಿತದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ದೇವರ ಉತ್ಸವವನ್ನು ಕಂಡಭಕ್ತರು ಭಕ್ತಿಯಿಂದ ದೇವರಿಗೆ ನಮಿಸಿ ಪುನೀತರಾದರು.
ಉದ್ಯಮಿ ಸುರೇಶ್ ಮಹದೇವು ಭಾಗಿ:ಕರಗ ಉತ್ಸವದಲ್ಲಿ ಸಮಾಜ ಸೇವಕರು, ಉದ್ಯಮಿ, ರೆನಾಲ್ಟ್ ನಿಸ್ಸಾನ್ ಕಾರ್ ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಮಹದೇವು ಅವರು ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವ ಪ್ರದರ್ಶಿಸಿದರು. ದೇವಸ್ಥಾನದ ಆಡಳಿತ ಮಂಡಳಿಯರು, ಯಜಮಾನರು ಹಾಗೂ ಗ್ರಾಮಸ್ಥರು ಉದ್ಯಮಿ ಸುರೇಶ್ ಮಹದೇವು ಅವರನ್ನು ಅಭಿನಂದಿಸಿದರು.
ಉತ್ಸವದಲ್ಲಿ ಹುಲ್ಕೆರೆ, ಮೈಸೂರು ಜಿಲ್ಲೆಯ ಮರಡಿಹುಂಡಿ, ಮಳಿಯೂರು, ಎಚ್.ಡಿ.ಕೋಡಿ ಹೊಸಹಳ್ಳಿ, ತಾಳಶಾಸನ, ಜವನಹಳ್ಳಿ, ಮಲ್ಲನಹಳ್ಳಿ, ಕೆಂಪಯ್ಯನಹುಂಡಿ, ಬರ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.ದೇವಸ್ಥಾನದ ಪೂಜಾರಿ ಕೃಷ್ಣ ಯಜಮಾನರಾದ ಕೆ.ಮಲ್ಲನಹಳ್ಳಿ ಸ್ವಾಮಣ್ಣ ,ಹುಲ್ಕೆರೆ ನಾಗಣ್ಣ, ಮರಡಿಹುಂಡಿ ಕುಮಾರಣ್ಣ, ಹೊಸಹೊಳಲು ಬೈರಪ್ಪ, ಮಳಿಯೂರು ದೇವರಾಜು, ಅಣ್ಣಯ್ಯಪ್ಪ ಸೇರಿದಂತೆ ಗ್ರಾಮಸ್ಥರು, ಭಕ್ತಾಧಿಗಳು ಭಾಗವಹಿಸಿದ್ದರು.