ಸಾರಾಂಶ
- ಈ ವರ್ಷ 2 ದಿನ ಬೆಟ್ಟ ಹತ್ತಲು ಅವಕಾಶ । 15 ವರ್ಷ ಮೇಲ್ಪಟ್ಟ 60 ವರ್ಷದೊಳಗಿನವರಿಗೆ ಅವಕಾಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇದೇ 19 ರಿಂದ 23 ರವರೆಗೆ ನಡೆಯಲಿರುವ ಬಿಂಡಿಗಾ ಶ್ರೀ ದೇವೀರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ವಾಹನಗಳ ಮುಖಾಂತರ ಆಗಮಿಸುವು ದರಿಂದ ಜಿಲ್ಲಾಧಿಕಾರಿ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದಾರೆ. ಜಾತ್ರೆ ನಡೆಯುವ ಅ. 19 ರಿಂದ 23 ರವರೆಗೆ ಜಿಲ್ಲೆಯಲ್ಲಿ ಮಳೆ ಬರುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದೇವಾಲಯಕ್ಕೆ ತೆರಳುವ ರಸ್ತೆ ಕಿರಿದಾಗಿರುವುದರಿಂದ ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನಸಂದಣಿಯಾಗಿ ಅನಾನುಕೂಲವಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ. ಬಿಂಡಿಗಾ ಮಲ್ಲೇನಹಳ್ಳಿ ಶ್ರೀ ದೇವಿರಮ್ಮ ದರ್ಶನಕ್ಕೆ ಅ. 19 ಮತ್ತು 20 ರಂದು ಬೆಟ್ಟ ಏರುವವರು 15 ವರ್ಷ ಮೇಲ್ಪಟ್ಟಿರ ಬೇಕು ಮತ್ತು 60 ವರ್ಷದ ಒಳಗಿರಬೇಕು. ಈ ಎರಡೂ ದಿನಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ತರೀಕೆರೆಯಿಂದ ವಾಹನಗಳಲ್ಲಿ ಆಗಮಿಸುವ ಭಕ್ತರು ಸ್ಥಳೀಯರು ಮಾತ್ರ ಲಿಂಗದಹಳ್ಳಿ ಮಾರ್ಗವಾಗಿ ಬಿಂಡಿಗಾ ಗ್ರಾಮಕ್ಕೆ ಬರುವಂತೆ ಹಾಗೂ ತರೀಕೆರೆ ಯಿಂದ ಅನ್ಯಕಾರ್ಯ ನಿಮಿತ್ತ ಚಿಕ್ಕಮಗಳೂರಿಗೆ ಬರುವ ಇತರೆ ಎಲ್ಲಾ ವಾಹನಗಳು ಅ. 19 ರ ಬೆಳಿಗ್ಗೆ 6 ಗಂಟೆಯಿಂದ ಅ. 20 ಮಧ್ಯಾಹ್ನ 2 ಗಂಟೆವರೆಗೆ ಕಡೂರು ಮಾರ್ಗವಾಗಿ ಬರುವಂತೆ ನಿರ್ದೇಶಿದ್ದಾರೆ. ತರೀಕೆರೆ-ಲಿಂಗದಳ್ಳಿ-ಸಂತವೇರಿ ಮಾರ್ಗವಾಗಿ ಬರುವವರು ತಮ್ಮ ವಾಹನಗಳನ್ನು ಕುಮಾರಗಿರಿಯಲ್ಲಿ ಪಾರ್ಕಿಂಗ್ ಮಾಡಬೇಕು. ಚಿಕ್ಕಮಗಳೂರು-ಕೈಮರ ಮಾರ್ಗವಾಗಿ ಬಿಂಡಿಗ ಮಲ್ಲೇನಹಳ್ಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನ ಗಳನ್ನು ನಿಗದಿಪಡಿಸಿರುವ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ಮಾಡಬೇಕು. ಯಾವುದೇ ಕಾರಣಕ್ಕೂ ರಸ್ತೆ ಬದಿಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಕೂಡದು. ಅಲ್ಲದೆ, ಜಾತ್ರೆ ದಿನಗಳಾದ ಅ.19ರಿಂದ 23 ರವರೆಗೆ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಗೇಟ್‌ನಿಂದ ಕುಮಾರಗಿರಿ ಕಮಾನುವರೆಗೆ ರಸ್ತೆಯ ಎರಡೂ ಬದಿಯಲ್ಲಿ ಯಾವುದೇ ರೀತಿ ವಾಹನಗಳನ್ನು ನಿಲುಗಡೆ ಮಾಡದಂತೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರಿನಿಂದ ಬಿಂಡಿಗಾ ಶ್ರೀ ದೇವಿರಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತರು ನಗರದ ಐ.ಜಿ.ರಸ್ತೆ, ಎಂ.ಜಿ.ರಸ್ತೆ, ಡಿಎಸಿಜಿ. ಪಾಲಿಟೆಕ್ನಿಕ್ ಮೈದಾನಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ತಮ್ಮ ವಾಹನ ನಿಲುಗಡೆ ಮಾಡಿ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಬಿಂಡಿಗಾ ಗ್ರಾಮಕ್ಕೆ ಪ್ರಯಾಣಿಸಿ ಸಹಕರಿಸುವಂತೆ ಸಲಹೆ ನೀಡಿದ್ದಾರೆ. --- ಬಾಕ್ಸ್ ----
ಗಿರಿ ಪ್ರದೇಶಕ್ಕೆ ಪ್ರವಾಸಿಗರು ತೆರಳದಂತೆ ಸೂಚನೆಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಹಾಗೂ ಮಾಣಿಕ್ಯಧಾರಾ ಸ್ಥಳಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಜಾತ್ರೆಯಿಂದ ಉಂಟಾಗುವ ಜನಸಂದಣಿ ಹಿನ್ನೆಲೆಯಲ್ಲಿ ಅ.19ರ ಬೆಳಿಗ್ಗೆ 6 ಗಂಟೆಯಿಂದ ಅ. 20 ರ ಸಂಜೆ 6 ಗಂಟೆವರೆಗೆ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ ಹಾಗೂ ಮಾಣಿಕ್ಯಾಧಾರಾಕ್ಕೆ ಪ್ರವಾಸಿಗರು ತೆರಳದಂತೆ ಜಿಲ್ಲಾಡಳಿತ ಕೋರಿದೆ.ಹೋಮ್ ಸ್ಟೇಗಳು, ರೆಸಾರ್ಟ್‌ಗಳು ಮತ್ತು ವಸತಿ ಗೃಹಗಳಲ್ಲಿ ಈಗಾಗಲೇ ಮುಂಗಡವಾಗಿ ಕೊಠಡಿ ಕಾಯ್ದಿರಿಸಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಜಿಲ್ಲಾಡಳಿತದ ಸಲಹೆ ಅನುಸರಿಸುವ ಮೂಲಕ ಭಕ್ತರು, ಸಾರ್ವಜ ನಿಕರು, ಪ್ರವಾಸಿಗರು ಸಹಕರಿಸುವಂತೆ ಕೋರಲಾಗಿದೆ.
----ರಾತ್ರಿ ವೇಳೆಯಲ್ಲಿ ಬೆಟ್ಟ ಹತ್ತಲು ಅವಕಾಶ ಇಲ್ಲಚಿಕ್ಕಮಗಳೂರು: ಬಿಂಡಿಗಾ ಆದಿಶಕ್ತ್ಯಾತ್ಮಕ ಶ್ರೀ ದೇವೀರಮ್ಮನವರ ದೀಪೋತ್ಸವದ ಹಿನ್ನಲೆಯಲ್ಲಿ ಅ.19 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಹಾಗೂ ಅ.20 ರಂದು ಬೆಳಗ್ಗೆ 7 ಗಂಟೆಯಿಂದ ಬೆಟ್ಟ ಹತ್ತಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ಗಿರಿ ಪ್ರದೇಶದಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾಗುತ್ತಿರುವ ಕಾರಣ ರಾತ್ರಿ ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ ಎಂದು ದೇವೀರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ್ ತಿಳಿಸಿದ್ದಾರೆ.ಅ. 19 ರಂದು ಬೆಳಗ್ಗೆ 7 ಗಂಟೆಗೆ ಬೆಟ್ಟದಲ್ಲಿ ಅಭಿಷೇಕ, ಪೂಜಾ ಕಾರ್ಯಕ್ರಮ ಜರುಗಿದ ಬಳಿಕ 9 ರಿಂದ 5 ಗಂಟೆವರೆಗೆ ದೇವೀರಮ್ಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 20 ರಂದು ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ವಿದ್ದು, ಸಂಜೆ 7 ಗಂಟೆಗೆ ದೀಪೋತ್ಸವ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
21 ರಂದು ದೇವೀರಮ್ಮ ದೇವಸ್ಥಾನದಲ್ಲಿ ದೇವಿಗೆ ಉಡುಗೆ ಪೂಜೆ, ಸಂಜೆ 6.30ಕ್ಕೆ ಕ್ಕೆ ಬೆಣ್ಣೆ ಬಟ್ಟೆ ಸುಡುವುದು ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, 22 ರಂದು ಮಹಾಗಣಪತಿ ಪೂಜೆ, ಕುಂಕುಮಾರ್ಚನೆ, 23 ರಂದು ಮಹಾ ಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ ವಿನಿಯೋಗ.ಶ್ರೀ ಕ್ಷೇತ್ರದಲ್ಲಿ ನಡೆಯುವ ಪ್ರಸಾದ ವಿನಿಯೋಗಕ್ಕೆ ಅಕ್ಕಿ, ಬೇಳೆ, ಎಣ್ಣೆ ಹಾಗೂ ಧನ ಸಹಾಯ ಮಾಡುವವರು ಕ್ಷೇತ್ರಕ್ಕೆ ತಂದು ಒಪ್ಪಿಸಬಹುದು. ಬೆಟ್ಟದ ಮೇಲೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.ದೇವಿಯ ದರ್ಶನದ ಬಳಿಕ ಬೆಟ್ಟದ ಮೇಲೆ ಕುಳಿತುಕೊಳ್ಳದೆ ಕೆಳಗೆ ಇಳಿಯಬೇಕು. ಬೆಟ್ಟದ ಹಾಗೂ ದೇವಸ್ಥಾನದ ಸುತ್ತ ಮುತ್ತ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ಎಸೆಯಬಾರದು, ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಬೆಟ್ಟದಲ್ಲಿ ಪಟಾಕಿ ಸಿಡಿಸು ವುದು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
-- 13 ಕೆಸಿಕೆಎಂ 2ಬಿಂಡಿಗಾ ಶ್ರೀ ದೇವೀರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಭಕ್ತರು ದೇವೀರಮ್ಮ ಬೆಟ್ಟ ಹತ್ತುವುದರಿಂದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಸೋಮವಾರ ಬೆಟ್ಟವನ್ನು ಹತ್ತಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದರು.