ಸಾರಾಂಶ
ಕಡೂರು, ತಾಲೂಕಿನ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಕಡೂರು ಪಟ್ಟಣದಲ್ಲಿ ದೇವಿಗೆ ಹಬ್ಬದ ಅಂಗವಾಗಿ ಬಾನಸೇವೆಯನ್ನು ಸಡಗರ ಸಂಭ್ರಮದಿಂದ ನಡೆಸಲಾಯಿತು.
ತಾಲೂಕಿನ ಅಂತರಘಟ್ಟೆಯಲ್ಲಿ ಸಡಗರ ಸಂಭ್ರಮದ ಬಾನಸೇವೆ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಅಂತರಘಟ್ಟೆಯ ಶ್ರೀ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಕಡೂರು ಪಟ್ಟಣದಲ್ಲಿ ದೇವಿಗೆ ಹಬ್ಬದ ಅಂಗವಾಗಿ ಬಾನಸೇವೆಯನ್ನು ಸಡಗರ ಸಂಭ್ರಮದಿಂದ ನಡೆಸಲಾಯಿತು.
ಕಳೆದ ಒಂದು ವಾರದಿಂದ ಸಾಂಪ್ರದಾಯಿಕವಾಗಿ ಅಲಂಕೃತಗೊಳಿಸಿದ ಎತ್ತಿನ ಗಾಡಿಗಳನ್ನು ರೈತರು ಮತ್ತಷ್ಟು ಸಿಂಗರಿಸುವ ಮೂಲಕ ಪಾನಕದ ಗಾಡಿಗಳ ಮೆರವಣಿಗೆಯನ್ನು ಪಟ್ಟಣದ ದೊಡ್ಡಪೇಟೆ ಮೂಲಕ ಆರಂಭಿಸಿ ಪ್ರಮುಖ ರಸ್ತೆಗಳಲ್ಲಿ ಸಾಲು-ಸಾಲಾಗಿ ಸಾಗುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದವು. ಮೆರವಣಿಗೆಯಲ್ಲಿ ಜೋಡೆತ್ತುಗಳನ್ನು ಮಧುವಣಗಿತ್ತಿಯಂತೆ ಶೃಂಗಾರಗೊಳಿಸಿದ್ದು ಎಲ್ಲರ ಗಮನ ಸೆಳೆಯಿತು. ಕೆಎಲ್ ವಿ ವೃತ್ತದಿಂದ ವಯಸ್ಸಿನ ಬೇಧವಿಲ್ಲದೆ ಸಾವಿರಾರು ಜನರು ಸಾಗುತ್ತಿದ್ದ ಅದ್ಧೂರಿ ಮೆರವಣಿಗೆಯಲ್ಲಿ ಧ್ವನಿ ವರ್ಧಕದ ಡಿ.ಜೆ. ಅಬ್ಬರಕ್ಕೆ ಯುವಕರು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಛತ್ರದ ಬೀದಿ ಸಮೀಪ ಬರುತ್ತಿದ್ದಂತೆ, ಪಾನಕದ ಬಂಡಿಗಳನ್ನು ವೇಗವಾಗಿ ಓಡಿಸುತ್ತಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಹೆಣ್ಣು ಮಕ್ಕಳು ಸೇರಿದಂತೆ ಸಾವಿರಾರು ಜನರು ಎತ್ತಿನ ಗಾಡಿಗಳನ್ನು ಓಡಿಸುವ ದೃಶ್ಯ ಕಣ್ತುಂಬಿಕೊಂಡು ಸಂಭ್ರಮಿಸಿದರು. ಸಂಜೆಯಿಂದ ಆರಂಭಗೊಂಡ ಮೆರವಣಿಗೆಯಿಂದ ಸುಮಾರು ಮೂರು ತಾಸು ಟ್ರಾಫಿಕ್ ಸಮಸ್ಯೆ ಉಂಟಾಯಿತು. ಗಾಡಿಯಲ್ಲಿ ಪಾನಕಗಳ ಹಂಡೆ ಯನ್ನಿಟ್ಟುಕೊಂಡು ಗ್ರಾಮದೇವತೆ ಶ್ರೀ ಕೆಂಚಾಂಬ ದೇಗುಲದ ಬಳಿ ಗಾಡಿಗಳನ್ನು ನಿಲ್ಲಿಸಿ ದೇವಿಗೆ ಪಾನಕದ ನೈವೇದ್ಯವನ್ನು ಅರ್ಪಿಸಿ ನಂತರ ಬನ್ನಿ ಮರದವರೆಗೆ ಪಾನಕದ ಗಾಡಿ ಓಡಿಸುವ ಮೂಲಕ ಸಂಭ್ರಮದ ಬಾನ ಸೇವೆಗೆ ತೆರೆ ಬಿದ್ದಿತು.ಮೆರವಣಿಗೆಯಲ್ಲಿ ಪುರಸಭೆಯ ಸದಸ್ಯ ತೋಟದಮನೆ ಮೋಹನ್, ಚೇತನ್ ಕೆಂಪರಾಜು ಮತ್ತಿತರರು ಇದ್ದರು. ಸಿಪಿಐಗಳಾದ ರಾಮಚಂದ್ರ ನಾಯಕ್, ರಫೀಕ್ ಹಾಗೂ ಪಿಎಸೈ ಪವನ್‌ಕುಮಾರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.4ಕೆಕೆಡಿಯು1.
ಕಡೂರು ಪಟ್ಟಣದಲ್ಲಿ ನಡೆದ ದುರ್ಗಾಂಬ ದೇವಿಯ ಬಾನದ ಸೇವೆ ಅಂಗವಾಗಿ ಕೆಎಲ್ ವಿ ವೃತ್ತದಲ್ಲಿ ನೆರೆದಿದ್ದ ಜನಸ್ತೋಮ.