ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಶ್ರೀಹಿರಿಯಮ್ಮದೇವಿ ಮತ್ತು ಶ್ರೀಏಳೂರಮ್ಮ ದೇವಿಯ ಹಬ್ಬವು ವಿಜೃಂಭಣೆಯಿಂದ ನಡೆಯಿತು. ಹಬ್ಬದ ಅಂಗವಾಗಿ ಶನಿವಾರ ಮುಂಜಾನೆ ನಡೆದ ಶ್ರೀಏಳೂರಮ್ಮ ದೇವಿಯ ಕೊಂಡೋತ್ಸವವನ್ನು ಸಹಸ್ರಾರು ಭಕ್ತರು ಸಾಕ್ಷೀಕರಿಸಿದರು.ಶಿವರಾತ್ರಿ ಹಬ್ಬಕ್ಕೆ ಮೊದಲು ಬರುವ ಶುಕ್ರವಾರ ಮತ್ತು ಶನಿವಾರಗಳಂದು ಗ್ರಾಮದಲ್ಲಿ ಶ್ರೀಹಿರಿಯಮ್ಮ ಮತ್ತು ಶ್ರೀಏಳೂರಮ್ಮ ದೇವಿಯರ ಹಬ್ಬ ನಡೆಸುವುದು ವಾಡಿಕೆ. ಅದರಂತೆ ಈ ಬಾರಿಯೂ ಗ್ರಾಮದ ಹೊರ ವಲಯದಲ್ಲಿನ ದೇವಾಲಯಗಳಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಹಬ್ಬ ಆಚರಿಸಲಾಯಿತು.
ಗುರುವಾರ ಸಂಜೆ ಶ್ರೀಹಿರಿಯಮ್ಮ ದೇವಿ ಮತ್ತು ಶ್ರೀಏಳೂರಮ್ಮದೇವಿಯ ಬಂಡಿ ಉತ್ಸವ, ಶುಕ್ರವಾರ ಮುಂಜನೆ ಶ್ರೀ ಹಿರಿಯಮ್ಮ ದೇವಿಯ ಕೊಂಡೋತ್ಸವ ನಡೆಸಲಾಯಿತು. ಶುಕ್ರವಾರ ರಾತ್ರಿ ಶ್ರೀ ಏಳೂರಮ್ಮ ದೇವಿಯ ದೇವಾಲಯ ಮುಂಭಾಗ ಕೊಂಡೋತ್ಸವಕ್ಕಾಗಿ ವಿಶೇಷ ಪೂಜೆಯೊಂದಿಗೆ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಮಧ್ಯರಾತ್ರಿ ಬಳಿಕ ದೇವಿಯ ಮೂರ್ತಿಗೆ ವಿಶೇಷ ಅಭಿಷೇಕ ಮಾಡಿ ಬೆಳ್ಳಿಕವಚ ಮತ್ತು ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.ಶನಿವಾರ ಮುಂಜನೆ ಸೂರ್ಯೋದಯದ ಹೊತ್ತಿಗೆ ಶ್ರೀಏಳೂರಮ್ಮ ದೇವಿಯ ಕೊಂಡೋತ್ಸವ ನಡೆಯಿತು. ಕಿವಿಗಡಚ್ಚಿಕ್ಕುವ ಸದ್ದಿನೊಂದಿಗೆ ಸಿಡಿಸಿದ ಪಟಾಕಿಗಳು ಬಾನಂಗಳದಲ್ಲಿ ಬಣ್ಣಬಣ್ಣದ ಬೆಳಕಿನ ಚಿತ್ತಾರ ಮೂಡಿಸಿದ್ದವು. ದೇವಿಯ ಪೂಜೆಯನ್ನು ಹೊತ್ತಿದ್ದ ಗುಡ್ಡಪ್ಪ ಅಲೋಕ ಅವರು ಕೊಂಡ ಹಾಯುವ ಮೂಲಕ ಗಮನ ಸೆಳೆದರು. ಕೊಂಡೋತ್ಸವ ವೇಳೆ ಭಕ್ತರು ಜಯಘೋಷ ಮೊಳಗಿಸಿದರು. ಬಳಿಕ ಭಕ್ತರು ಕೊಂಡಕ್ಕೆ ಅಳ್ಳು ಹಾಕಿ ಹರಕೆಯನ್ನು ತೀರಿಸಿದರು.
ಮಡೆ ಮತ್ತು ತಂಬಿಟ್ಟಿನ ಆರತಿಯೊಂದಿಗೆ ಗ್ರಾಮದ ಮಹಿಳೆಯರು ಮೆರವಣಿಗೆಯಲ್ಲಿ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ನೆರೆದಿದ್ದ ಭಕ್ತರಿಗೆ ಜಹಾಂಗೀರ್, ಮೊಸರನ್ನು ಮತ್ತು ಬಾತ್‌ನ್ನು ಪ್ರಸಾದದ ವರೂಪದಲ್ಲಿ ವಿತರಿಸಲಾಯಿತು. ಹಬ್ಬದ ಅಂಗವಾಗಿ ದೇವಾಲಯ ಮತ್ತು ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಶ್ರೀ ಏಳೂರಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್‌ನ ಅಧ್ಯಕ್ಷ ನಾಗರಾಜು, ಕಾರ್‍ಯದರ್ಶಿ ಸಿ.ಮಾದಪ್ಪ, ಖಜಂಚಿ ಮಾದೇಗೌಡ, ಹಿಂದೂಪರ ಸಂಘಟನೆ ಕಾರ್‍ಯದರ್ಶಿ ಪಂಚಾಕ್ಷರಿ ಗಂಗಡ್ಕಾರ್ ಇತರರು ಭಾಗವಹಿಸಿದ್ದರು.ಬಟ್ಟೆ ಬ್ಯಾಗ್ ನೀಡಿ ಪರಿಸರ, ಪ್ಲಾಸ್ಟಿಕ್ ಜಾಗೃತಿ
ಶ್ರೀ ಏಳೂರಮ್ಮ ದೇವಿಯ ಕೊಂಡೋತ್ಸವ ವೇಳೆ ಪರಿಸರ ಮಿತ್ರ ಹಾಗೂ ಚೆನ್ನಮ್ಮ ಎಜುಕೇಷನ್ ಟ್ರಸ್ಟ್‌ನ ಸಂಸ್ಥಾಪಕ ಜಯಶಂಕರ್ ಅವರು ಜನರಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.ಪರಿಸರ ಸಂರಕ್ಷಣೆ ದೃಷ್ಟಿಯಿಂದ ಜನರು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಲ್ಲಿಸಬೇಕು. ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಕುಡಿಯುವ ನೀರು ಖರೀದಿ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು. ಇದರಿಂದ ನಾವು ಪರಿಸರ ಸಂರಕ್ಷಣೆಗೆ ಸ್ವಲ್ಪ ಪ್ರಮಾಣದಲ್ಲಾದರೂ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಒಂದಷ್ಟು ಜನರಿಗೆ ಬಟ್ಟೆ ಬ್ಯಾಗ್‌ಗಳನ್ನು ಕೊಡುಗೆಯಾಗಿ ನೀಡಿ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳ ಬದಲಿಗೆ ಬಟ್ಟೆ ಬ್ಯಾಗ್‌ಗಳನ್ನೇ ಬಳಸಬೇಕೆಂದು ಮನವಿ ಮಾಡಿದರು.