ಶ್ರೀ ಗವಿರಂಗನಾಥ ಸ್ವಾಮಿಯ ಮಹಿಮೆ ಅಪಾರವಾಗಿದ್ದು ದೂರದ ಜಿಲ್ಲೆಗಳಿಂದಲೂ ತಮ್ಮ ದನಕರುಗಳು ಕಾಯಿಲೆಗೆ ತುತ್ತಾದರೆ, ಹಾಗೂ ಕರು ಹಾಕಿದರೆ ಇಲ್ಲಿಗೆ ಬಂದು ಎಡೆ ಇಟ್ಟು ಪೂಜೆ ಸಲ್ಲಿಸಿ ತೀರ್ಥವನ್ನು ದನಕರುಗಳಿಗೆ ಪ್ರೋಕ್ಷಿಸುವ ಪರಿಪಾಠ ಈ ಹಿಂದಿನಿಂದಲೂ ಬೆಳೆದು ಬಂದಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಇತಿಹಾಸ ಪ್ರಸಿದ್ಧ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಇತಿಹಾಸ ಪ್ರಸಿದ್ಧ ಶ್ರೀಗವಿರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವದ ಹಾಗೂ ದನಗಳ ಜಾತ್ರೆಯ ಸ್ಥಳಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು.

ಜ.15 ರಿಂದ 19 ರವರೆಗೆ ಐದು ದಿನಗಳ ಕಾಲ ನೆಡೆಯಲಿರುವ ಶ್ರೀ ಗವಿರಂಗನಾಥಸ್ವಾಮಿಯ ದನಗಳ ಜಾತ್ರೆ ಹಾಗೂ ರಥಸಪ್ತಮಿ ನಡೆಯಲಿದ್ದು, ದನಕರುಗಳಿಗೆ ಹಾಗೂ ಜಾತ್ರೆಗೆ ಮತ್ತು ರಥೋತ್ಸವಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಬೇಕು. ಹೊರಜಿಲ್ಲೆ, ಹೊರ ತಾಲೂಕುಗಳಿಂದ ದನ- ಕರುಗಳು, ಸಾರ್ವಜನಿಕರು ಇಲ್ಲಿಗೆ ಆಗಮಿಸಲಿದ್ದು ಅವರಿಗೆ ಕುಡಿಯುವ ನೀರು, ರಸ್ತೆ, ಬೀದಿದೀಪ ಸೇರಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ತುರ್ತಾಗಿ ಆಗಬೇಕಾಗಿರುವ ಕೆಲಸಗಳನ್ನು ಇಂದಿನಿಂದಲೇ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಹಾಗೂ ತಾಪಂ ಇಒ ಸೇರಿದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶ್ರೀ ಗವಿರಂಗನಾಥಸ್ವಾಮಿಯ ಮಹಿಮೆ:

ಶ್ರೀ ಗವಿರಂಗನಾಥ ಸ್ವಾಮಿಯ ಮಹಿಮೆ ಅಪಾರವಾಗಿದ್ದು ದೂರದ ಜಿಲ್ಲೆಗಳಿಂದಲೂ ತಮ್ಮ ದನಕರುಗಳು ಕಾಯಿಲೆಗೆ ತುತ್ತಾದರೆ, ಹಾಗೂ ಕರು ಹಾಕಿದರೆ ಇಲ್ಲಿಗೆ ಬಂದು ಎಡೆ ಇಟ್ಟು ಪೂಜೆ ಸಲ್ಲಿಸಿ ತೀರ್ಥವನ್ನು ದನಕರುಗಳಿಗೆ ಪ್ರೋಕ್ಷಿಸುವ ಪರಿಪಾಠ ಈ ಹಿಂದಿನಿಂದಲೂ ಬೆಳೆದು ಬಂದಿದೆ.

ಅದರಂತೆ ಅನಾರೋಗ್ಯ ಪೀಡಿತ ದನಕರುಗಳಿಗೆ ಶ್ರೀ ಗವಿರಂಗನಾಥಸ್ವಾಮಿಯ ಅಭಯ ಪುರಾತನ ಕಾಲದಿಂದಲೂ ಇದ್ದು, ನಮ್ಮ ಪೂರ್ವಜರೂ ಸಹ ಇದನ್ನು ಅಳವಡಿಸಿಕೊಂಡು ಬಂದಿದ್ದಾರೆ. ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಹಾಗೂ ತಾಲೂಕಿನ ಗವಿರಂಗನಾಥಸ್ವಾಮಿಯ ಭಕ್ತರು ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ತಹಸೀಲ್ದಾರ್ ಡಾ.ಎಸ್.ಯು ಅಶೋಕ್, ತಾಪಂ. ಇಒ ಸುಷ್ಮ, ಟಿಎಪಿಸಿಎಂಎಸ್ ನಿರ್ದೇಶಕ ಮೋಹನ್, ರವಿಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.