ಸಾರಾಂಶ
ಶ್ರೀ ಕೃಷ್ಣನ ಬಾಲ ಲೀಲೆಗಳು, ರಾಧಾ ಮೋಹನ ಪಾತ್ರಗಳು, ಗೋಪ ಗೋಪಿಯರೊಂದಿಗಿನ ನೃತ್ಯಗಳು, ಕೋಲಾಟ, ಬೆಣ್ಣೆ ಮೊಸರು ಸವಿಯುವ ಪ್ರಹಸನಗಳು, ಮೊಸರು ಕುಡಿಕೆ ಒಡೆಯುವಿಕೆ ಇತ್ಯಾದಿ ಪ್ರದರ್ಶನಗಳು ಶ್ರೀ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ಆಕರ್ಷಕವಾಗಿ ಮೂಡಿಬಂದವು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.ಶ್ರೀ ಕೃಷ್ಣನ ಬಾಲ ಲೀಲೆಗಳು, ರಾಧಾ ಮೋಹನ ಪಾತ್ರಗಳು, ಗೋಪ ಗೋಪಿಯರೊಂದಿಗಿನ ನೃತ್ಯಗಳು, ಕೋಲಾಟ, ಬೆಣ್ಣೆ ಮೊಸರು ಸವಿಯುವ ಪ್ರಹಸನಗಳು, ಮೊಸರು ಕುಡಿಕೆ ಒಡೆಯುವಿಕೆ ಇತ್ಯಾದಿ ಪ್ರದರ್ಶನಗಳು ಶ್ರೀ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ಆಕರ್ಷಕವಾಗಿ ಮೂಡಿಬಂದವು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಶ್ರೀ ಕೃಷ್ಣನ ಅವತಾರವು ಒಂದು ಅಮೋಘ ಚೈತನ್ಯ ಮತ್ತು ಶಕ್ತಿಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು.
ಶ್ರೀ ಕೃಷ್ಣನ ಬಾಹ್ಯ ರೂಪ ಈಗ ಇರದಿದ್ದರೂ ಆತನ ಆದರ್ಶ, ಅನುಕರಣೆ 5 ಸಾವಿರ ವರ್ಷಗಳ ಬಳಿಕವೂ ಜೀವಂತವಾಗಿದ್ದು, ಸರ್ವಕಾಲಿಕ ಶಾಶ್ವತ ಪ್ರಜ್ಞೆಯಾಗಿ ಉಳಿದಿದೆ. ಇಂದಿನ ಆಧುನಿಕ ಯುಗದಲ್ಲಿ ಕೃಷ್ಣನ ಗೀತಾ ಬೋಧನೆ, ಆ ಮಾರ್ಗದ ಪಾಲನೆ ಮಕ್ಕಳ ಜೀವನವನ್ನು ಉತ್ತಮಗೊಳಿಸಲು ಸಹಕಾರಿ ಎಂದು ರಾಜೇಂದ್ರ ಅಭಿಪ್ರಾಯಪಟ್ಟರು.ಶಿಕ್ಷಕ ವೃಂದ ತರಬೇತಿ ನೀಡಿ, ಬಾಲಕ-ಬಾಲಕಿಯರಿಂದಲೇ ನಡೆದ ಈ ವೈವಿಧ್ಯಮಯ ಕಾರ್ಯಕ್ರಮಗಳು ಪೋಷಕರು, ಅತಿಥಿಗಳ ಮನ ಸೆಳೆದವು. ಮಕ್ಕಳೇ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಆಡಳಿತಾಧಿಕಾರಿ ಕೆ.ವಿ. ರವಿ, ಶಿಕ್ಷಕಿಯರಾದ ಕೆ.ಕೆ. ಭಾರತಿ, ಸೋನ, ಶಕ್ತಿಯ ಸಲಹಾ ಸಂಪಾದಕ ಬಿ.ಜಿ. ಅನಂತ ಶಯನ, ಉಷಾ ರಾಜೇಂದ್ರ ಹಾಜರಿದ್ದರು.