ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿ ವಿವಿಧ ತಾಲೂಕುಗಳಲ್ಲಿ ಶ್ರೀಕೃಷ್ಣ ಜನ್ಮಷ್ಠಾಮಿಯನ್ನು ಅತ್ಯಂತ ಸಂಭ್ರಮ, ಸಡಗರದಿಂದ ಶನಿವಾರ ಆಚರಿಸಲಾಯಿತು.ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಲಾಯಿತು. ಶಾಲೆಗಳಲ್ಲಿ ಪುಟ್ಟ ಮಕ್ಕಳು ರಾಧಾ-ಕೃಷ್ಣ ಸೇರಿ ವಿವಿಧ ರೀತಿಯ ವೇಷ-ಭೂಷಣಗಳನ್ನು ಧರಿಸಿ ಜನ್ಮಾಷ್ಠಮಿಯ ಕಳೆಯನ್ನು ಹೆಚ್ಚಿಸಿದ್ದರು. ಇಸ್ಕಾನ್ ಸೇರಿ ಶ್ರೀಕೃಷ್ಣ, ವಿಠಲ, ರಾಧಾ-ರುಕ್ಮಿಣಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆದವು. ಇನ್ನು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಲಾಯಿತು. ಶ್ರೀಮಠದ ಮುಂಭಾಗದಲ್ಲಿ ಬಣ್ಣದ ನೀರಿನ ಮಡಿಕೆ ಹೊಡೆಯುವ ಸ್ಪರ್ಧೆ ನಡೆಯಿತು.ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸೇರಿದಂತೆ ಶ್ರೀಮಠದ ವಿದ್ವಾಂಸರು, ಸಾಂಸ್ಕೃತಿಕ ವಿದ್ಯಾಪೀಠದ ವಿದ್ಯಾರ್ಥಿಗಳು ಮೇಲೆ ಕಟ್ಟಿದ ಬಣ್ಣದ ನೀರು ತುಂಬಿದ ಮಡಿಕೆಯನ್ನು ಕೋಲಿನಿಂದ ಹೊಡೆದರು.
ಜಿಲ್ಲಾಡಳಿತದಿಂದ ಆಚರಣೆ: ರಾಯಚೂರು ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಆಚರಿಸಲಾಯಿತು. ನಗರದ ಮುಖ್ಯರಸ್ತೆಯಲ್ಲಿ ಶ್ರೀಕೃಷ್ಣ ದೇವರ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು. ನಂತರ ಯಾದವ್ ಕಲ್ಯಾಣ ಮಂಟಪದಲ್ಲಿ ನಡೆದ ವೇದಿಕೆ ಸಮಾರಂಭವನ್ನು ಸಂಸದ ಜಿ.ಕುಮಾರ ನಾಯಕ ಅವರು ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಶ್ರೀಕೃಷ್ಣನ ಪ್ರಬುದ್ಧತೆ, ಮುತ್ಸದ್ಧಿತನವು ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿದ್ದು, ನಮ್ಮೆಲ್ಲರನ್ನು ರಕ್ಷಿಸುವ ಶ್ರೀ ಕೃಷ್ಣನು ತಿಳಿಸಿದ ಆದರ್ಶ ಜೀವನ ಮೌಲ್ಯಗಳನ್ನು ನಾವೆಲ್ಲರು ಪಾಲನೆ ಮಾಡಬೇಕು. ಶ್ರೀ ಕೃಷ್ಣನು ಪುರತಾನ ಕಾಲದ ಸುಪ್ರಸಿದ್ಧ ಸಂಧಾನಕಾರರಾಗಿದ್ದಾರೆ. ಶ್ರೀ ಕೃಷ್ಣನ ಹೇಳಿದ ತತ್ವಗಳು ಪ್ರತಿ ಮನೆ ಮನೆಯಲ್ಲೂ ಸ್ಮರಣೆಯಾಗಬೇಕು ಎಂದರು.
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಮಹಾಭಾರತದಲ್ಲಿ ಪಾಂಡವರು ಜಯಿಸಲು ಶ್ರೀ ಕೃಷ್ಣನೇ ಕಾರಣಕರ್ತರು, ಶ್ರೀಕೃಷ್ಣನ ತತ್ವಗಳು, ಉಪನಿಷತ್ತು ಗಳನ್ನು ನಮ್ಮ ಜೀವನದ ಮೌಲ್ಯಕ್ಕೆ ಅಳವಡಿಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ, ಸೌಮ್ಯತೆಯ ಒಡನಾಟದಿಂದ ಬಾಳುವ ಸಮಾಜವೆಂದರೆ ಯಾದವ ಸಮಾಜವಾಗಿದೆ ಎಂದು ತಿಳಿಸಿದರು.ಎಂಎಲ್ಸಿ ಎ.ವಸಂತಕುಮಾರ,ಹಿರಿಯ ಮುಖಂಡ ಕೆ.ಶಾಂತಪ್ಪ ಮಾತನಾಡಿದರು.
ಈ ವೇಳೆ ಶ್ರೀಕೃಷ್ಣನ ಕುರಿತು ಪ್ರದೀಪ್ ಕುಮಾರ್ ದೀಕ್ಷಿತ್ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಜನಪ್ರತಿನಿಧಿಗಳು ಹಾಗೂ ವಿವಿಧ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಹಿರಿಯ ಸದಸ್ಯರಾದ ಜಯಣ್ಣ, ಬಿ.ರಮೇಶ, ಶಶಿಧರ, ಆರ್.ಡಿ.ಎ.ಸದಸ್ಯರಾದ ನರಸಿಂಹಲು, ಮುಖಂಡರಾದ ತಿಮ್ಮಪ್ಪ ನಾಡಗೌಡ, ಎ.ಮಾರೆಪ್ಪ ವಕೀಲರು, ರಾಜಶೇಖರ ನಾಯಕ, ಮೊಹಮದ್ ಶಾಲಂ, ದಾರಪ್ಪ ಯಾದವ್ ಸೇರಿ ಇತರೆ ಮುಖಂಡರು, ಯುವಕರು,ಮಹಿಳೆಯರು, ಮಕ್ಕಳು ಇದ್ದರು.