ಸಾರಾಂಶ
ಹಾವೇರಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಗರದ ಹಾನಗಲ್ಲ ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ಶನಿವಾರ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಬೆಳಗಿನ ಜಾವ ಶ್ರೀಕೃಷ್ಣ ದೇವರಿಗೆ ಪಂಚಾಮೃತ ಅಭಿಷೇಕವನ್ನು ನಡೆಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಶ್ರೀಕೃಷ್ಣ ದೇವರಿಗೆ ಕಾಕಡಾ, ಮಲ್ಲಿಗೆ, ಸೇವಂತಿಗೆ ಸೇರಿದಂತೆ ತರಹೇವಾರಿ ಹೂಗಳಿಂದ ಶೃಂಗರಿಸಿ ಅಲಂಕಾರ ಪೂಜೆ ನಡೆಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದ ಮೂರು ದಿನಗಳಿಂದ ವಿದ್ವಾನ್ ಪಸಗಿ ವಿಜಯೇಂದ್ರ ಆಚಾರ ಬಳ್ಳಾರಿ ಅವರಿಂದ ದಾಸರು ಕಂಡ ಕೃಷ್ಣ ಬಗ್ಗೆ ಪ್ರತಿದಿನ ಸಂಜೆ 6.30ರಿಂದ 8 ಗಂಟೆ ವರೆಗೆ ಕೀರ್ತನೆ ಜರುಗಿತು.ಶನಿವಾರ ಸಂಜೆ 6.30ರಿಂದ 8ರ ವರೆಗೆ ವಿದ್ವಾನ್ ವರದೇಂದ್ರ ಗಂಗಾಖೇಡ ಹಾಗೂ ಸಂಗಡಿಗರಿಂದ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಆನಂತರ ರಾತ್ರಿ 12ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ನಡೆಯಿತು. ಆ ಬಳಿಕ ಶ್ರೀ ಕೃಷ್ಣನ ಪೂಜೆ, ಅರ್ಘ್ಯ, ಅಷ್ಟಾವಧಾನ, ತೀರ್ಥ ಪ್ರಸಾದ ಸೇವೆ ಜರುಗಿತು. ಬಳಿಕ ವರದೇಂದ್ರ ಗಂಗಾಖೇಡ ಮತ್ತು ಸಂಗಡಿಗರಿಂದ ಕೃಷ್ಣನ ಜನ್ಮ ಪ್ರವಚನವನ್ನು ಪ್ರಸ್ತುತಪಡಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಟ್ರಸ್ಟ್‌ನ ಧರ್ಮದರ್ಶಿ ವಸಂತ ಮೊಕ್ತಾಲಿ ಸೇರಿದಂತೆ ಶ್ರೀಕೃಷ್ಣನ ಭಕ್ತರು ಪಾಲ್ಗೊಂಡಿದ್ದರು.
ಗಮನ ಸೆಳೆದ ಮಕ್ಕಳು: ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸದೌತಣವನ್ನುಂಟು ಮಾಡಿತ್ತು. ಎರಡು ವರ್ಷದಿಂದ ಎಂಟು ವರ್ಷದೊಳಗಿನ ಮಕ್ಕಳು ಶ್ರೀ ಕೃಷ್ಣನ ವೇಷಭೂಷಣಗಳನ್ನು ತೊಟ್ಟು ಗಮನ ಸೆಳೆದರು. ಮಕ್ಕಳ ತಾಯಂದಿರು ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಶ್ರೀ ಕೃಷ್ಣನ ವೇಷಭೂಷಣಗಳನ್ನು ತೊಡಿಸಿ, ಮಕ್ಕಳಲ್ಲಿ ಮುದ್ದು ಕೃಷ್ಣನನ್ನು ಕಂಡು ಆನಂದಿಸಿದರು.ಇಂದು ಪ್ರಸಾದ ವಿತರಣೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ. 17ರಂದು ಶ್ರೀಕೃಷ್ಣನ ಪೂಜೆ, ನೈವೇದ್ಯ ಸಮರ್ಪಣೆ, ತೀರ್ಥ ಪ್ರಸಾದ ಹಾಗೂ ಮಹಾ ಪ್ರಸಾದ ವಿತರಣೆ ನಡೆಯಲಿದೆ.