ಸಾರಾಂಶ
ಪುತ್ತೂರು: ಸಾಮಾಜಿಕ ಬದುಕಿನಲ್ಲಿ ಕಲಿಕೆಗಾಗಿ ಶ್ರೀಕೃಷ್ಣ ಹಲವು ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ. ಆಡಳಿತ ನಡೆಸುವುದಕ್ಕೆ ಹುದ್ದೆ ಮುಖ್ಯವಲ್ಲ. ಅದಕ್ಕೆ ಜವಾಬ್ದಾರಿ, ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಸಾಕು ಎಂಬುವುದು ಶ್ರೀಕೃಷ್ಣನ ಚಿಂತನೆ. ಹುಟ್ಟಿದವನು ಸಾಧಕನಾಗಬೇಕು ಎಂಬುವುದನ್ನು ತನ್ನ ಬದುಕಿನಲ್ಲಿ ಶ್ರೀಕೃಷ್ಣ ಪ್ರತ್ಯಕ್ಷವಾಗಿ ಸಾಕ್ಷಿ ನೀಡಿದ್ದಾನೆ. ಹಾಗಾಗಿ ಶ್ರೀಕೃಷ್ಣ ಸಾರ್ವಕಾಲಿಕ ಸತ್ಯ ಎಂದು ಎವಿಜಿ ಆಂಗ್ಲಮಾದ್ಯಮ ಶಾಲಾ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಅಭಿಪ್ರಾಯಪಟ್ಟರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಗೊಲ್ಲ (ಯಾದವ) ಸಂಘ ಮತ್ತು ತಾಲೂಕು ಯಾದವ ಸಭಾ ಸಮಿತಿ ವತಿಯಿಂದ ಮಿನಿವಿಧಾನ ಸೌಧದ ತಾಲೂಕುಕಚೇರಿ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಜಯಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಮರಣಾ ಉಪನ್ಯಾಸ ನೀಡಿದರು.ಸಾಮಾನ್ಯ ವ್ಯಕ್ತಿಯೋರ್ವ ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಶ್ರೀಕೃಷ್ಣನ ಬದುಕು ಅರ್ಥ ಮಾಡಿಸುತ್ತದೆ. ಧರ್ಮ, ಜಾತಿ, ಕೋಮುವಾದ ಎಲ್ಲವನ್ನೂ ಬದಿಗೊತ್ತಿ ಬದುಕುಕಟ್ಟಿಕೊಳ್ಳುವುದನ್ನು ಕೃಷ್ಣನ ಜೀವನ ನಮಗೆ ನಿದರ್ಶನವಾಗಿದೆ. ಎಲ್ಲಾ ರೀತಿಯ ಜೀವನ ಅನುಕರಿಸಲು-ಅನುಸರಣೆ ಮಾಡಲು ಕೃಷ್ಣನ ಬದುಕು ಜೀವಂತ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ್ ರೈ ಅವರು ಮಾತನಾಡಿ, ಶ್ರೀಕೃಷ್ಣನ ಜೀವನ ಸಂದೇಶಗಳು ನಮ್ಮ ಸಮಾಜಕ್ಕೆ ದಾರಿದೀಪವಾಗಿದೆ. ಅನ್ಯಾಯ ಮಾಡುವವರಿಗೆ ಯಾವ ರೀತಿಯ ಶಿಕ್ಷೆ ನೀಡಬಹುದು ಎಂಬುವುದನ್ನೂ ಕೃಷ್ಣನ ಬದುಕು ತೋರಿಸಿಕೊಟ್ಟಿದೆ. ಯಾವುದೇ ವಿಚಾರದಲ್ಲಿಯೂ ಪ್ರತಿಫಲ ಸಿಗಬೇಕಾದರೆ ನಡವಳಿಕೆ ಮುಖ್ಯವಾಗುತ್ತದೆ. ನಮಗೆ ತಂದೆ ತಾಯಿಯೇ ದೇವರು ಎಂಬುವುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಶ್ರೀಕೃಷ್ಣನ ಜೀವನಾದರ್ಶ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಎಂದರು.ತಾಲೂಕು ಯಾದವ ಸಭಾದ ಅಧ್ಯಕ್ಷ ಪ್ರಸಾದ್ ಪಾಣಾಜೆ ಮಾತನಾಡಿ, ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಕೃಷ್ಣನ ಜೀವನ ನಮಗೆ ಆದರ್ಶವಾಗಬೇಕು. ಈ ಸರ್ಕಾರಿ ಕಾರ್ಯಕ್ರಮವನ್ನು ನಾಲ್ಕು ಗೋಡೆಗಳಿಗೆ ಸೀಮಿತವಾಗಿ ಮಾಡುವುದನ್ನು ಬಿಟ್ಟು ಸಾರ್ವತ್ರಿಕವಾಗಿ ಆಚರಣೆ ಮಾಡಿದಾಗ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗಲು ಸಾಧ್ಯವಾಗುತ್ತದೆ ಎಂದರು. ಗೊಲ್ಲ(ಯಾದವ) ಸಂಘದ ಅಧ್ಯಕ್ಷ ಇ.ಎಸ್.ವಾಸುದೇವ ಅವರು ಶುಭ ಹಾರೈಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ದಯಾನಂದ್ ಡಿ.ಟಿ ಸ್ವಾಗತಿಸಿ, ನಿರೂಪಿಸಿದರು. ಗೋಪಾಲ್ ವಂದಿಸಿದರು.