ಮಯೂರಧ್ವಜನ ನಿಷ್ಕಪಟ ಭಕ್ತಿಗೆ ಮನಸೋತ ಶ್ರೀಕೃಷ್ಣ ತನ್ನ ನಿಜರೂಪವನ್ನು ತೋರಿಸಿ, ತನ್ನೊಂದಿಗೆ ಬಂದವನು ಅರ್ಜುನನೆಂದು ಪರಿಚಯಿಸುತ್ತಾನೆ. ಬಳಿಕ ಮಯೂರಧ್ವಜನ ತಲೆಯನ್ನು ನೇವರಿಸಿ ಅನುಗ್ರಹಿಸುವ ಸನ್ನಿವೇಶವನ್ನು ಮಹಾಕವಿ ಲಕ್ಷ್ಮೀಶ ತನ್ನ ಕಾವ್ಯದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾನೆ ಎಂದು ರುಕ್ಮಿಣೀ ನಾಗೇಂದ್ರ ವಿವರಿಸಿದರು. ಪಾಂಡಿತ್ಯಪೂರ್ಣ ಕವಿಯಾದ ಲಕ್ಷ್ಮೀಶ ತನ್ನ ಕಾವ್ಯದಲ್ಲಿ ‘ವಿದ್ವತ್ಸಭಾವಲಯಂ ಅರಿಯೆ ವಿಚಾರಿಸಿದೆಂ’ ಎಂದು ಹೇಳಿಕೊಳ್ಳುತ್ತಾನೆ.

ಕನ್ನಡಪ್ರಭ ವಾರ್ತೆ ಹಾಸನ

ಅಪ್ಪಟ ಹರಿಭಕ್ತನಾದ ಮಯೂರಧ್ವಜನ ಭಕ್ತಿಗೆ ಮೆಚ್ಚಿದ ಶ್ರೀಕೃಷ್ಣನು ತನ್ನ ನಿಜರೂಪವನ್ನು ತೋರಿಸಿ ಅನುಗ್ರಹಿಸಿದ ಸನ್ನಿವೇಶವನ್ನು ಮಹಾಕವಿ ಲಕ್ಷ್ಮೀಶ ತನ್ನ ಕಾವ್ಯದಲ್ಲಿ ಅತ್ಯಂತ ಸುಂದರವಾಗಿ ನಿರೂಪಿಸಿದ್ದಾನೆ ಎಂದು ಗಮಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವ್ಯಾಖ್ಯಾತೃ ರುಕ್ಮಿಣಿ ನಾಗೇಂದ್ರ ತಿಳಿಸಿದರು.ನಗರದ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಸಹಯೋಗದಲ್ಲಿ ಅ. ೧೬ರಂದು ಶುಕ್ರವಾರ ಸಂಜೆ ಆಯೋಜಿಸಿದ್ದ ಗಮಕ ಕಾರ್ಯಕ್ರಮದಲ್ಲಿ ಅವರು ವ್ಯಾಖ್ಯಾನ ನೀಡಿದರು. ಮಯೂರಧ್ವಜನ ಭಕ್ತಿಯನ್ನು ಪರೀಕ್ಷಿಸುವ ಉದ್ದೇಶದಿಂದ ಶ್ರೀಕೃಷ್ಣನು ಅರ್ಜುನನೊಂದಿಗೆ ಬ್ರಾಹ್ಮಣ ವೇಷದಲ್ಲಿ ಆತನ ಆಸ್ಥಾನಕ್ಕೆ ಬರುತ್ತಾನೆ. ತನ್ನ ಮಗನನ್ನು ಸಿಂಹವೊಂದು ಹಿಡಿದಿದ್ದು, ಮಯೂರಧ್ವಜನ ದೇಹದ ಅರ್ಧಭಾಗವನ್ನು ನೀಡಿದರೆ ಮಗನನ್ನು ಬಿಡುವುದಾಗಿ ಸಿಂಹ ಹೇಳಿದೆ ಎಂದು ತಿಳಿಸುತ್ತಾನೆ. ಇದಕ್ಕೆ ಒಪ್ಪಿದ ಮಯೂರಧ್ವಜ ತನ್ನ ದೇಹವನ್ನೇ ದಾನ ಮಾಡಲು ನಿರ್ಧರಿಸುತ್ತಾನೆ. ಪತ್ನಿ ಮತ್ತು ಮಗನಿಗೆ ಹರಿತವಾದ ಗರಗಸದಿಂದ ತನ್ನ ದೇಹವನ್ನು ತಲೆಯಿಂದ ಸೀಳುವಂತೆ ಸೂಚಿಸುತ್ತಾನೆ. ಅದರಂತೆ ಇಬ್ಬರೂ ದೇಹವನ್ನು ಸೀಳಲು ಆರಂಭಿಸಿದಾಗ ಮಯೂರಧ್ವಜನ ಒಂದು ಕಣ್ಣಿನಿಂದ ಕಣ್ಣೀರು ಬರುತ್ತದೆ. ಇದನ್ನು ಗಮನಿಸಿದ ಬ್ರಾಹ್ಮಣ ವೇಷಧಾರಿ ಕೃಷ್ಣ, ಮನಸ್ಸಿಲ್ಲದೆ ನೀಡುವ ದಾನ ತನಗೆ ಬೇಡವೆಂದು ಹೇಳಿ ಹೊರಡಲು ಮುಂದಾಗುತ್ತಾನೆ. ಆಗ ಮಯೂರಧ್ವಜ ತನ್ನ ಒಂದು ಕಣ್ಣಿನಿಂದ ಮಾತ್ರ ನೀರು ಬಂದಿರುವುದಕ್ಕೆ ಕಾರಣ ತಿಳಿಸುತ್ತಾನೆ. ದೇಹದ ಒಂದು ಭಾಗ ಪರೋಪಕಾರಕ್ಕೆ ಉಪಯೋಗವಾಗುತ್ತಿದೆ, ಇನ್ನೊಂದು ಭಾಗ ನಿರರ್ಥಕವಾಗುತ್ತಿದೆ ಎಂಬ ನೋವಿನಿಂದ ಕಣ್ಣೀರು ಬಂದಿದೆ ಎಂದು ವಿವರಿಸುತ್ತಾನೆ.ಮಯೂರಧ್ವಜನ ನಿಷ್ಕಪಟ ಭಕ್ತಿಗೆ ಮನಸೋತ ಶ್ರೀಕೃಷ್ಣ ತನ್ನ ನಿಜರೂಪವನ್ನು ತೋರಿಸಿ, ತನ್ನೊಂದಿಗೆ ಬಂದವನು ಅರ್ಜುನನೆಂದು ಪರಿಚಯಿಸುತ್ತಾನೆ. ಬಳಿಕ ಮಯೂರಧ್ವಜನ ತಲೆಯನ್ನು ನೇವರಿಸಿ ಅನುಗ್ರಹಿಸುವ ಸನ್ನಿವೇಶವನ್ನು ಮಹಾಕವಿ ಲಕ್ಷ್ಮೀಶ ತನ್ನ ಕಾವ್ಯದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾನೆ ಎಂದು ರುಕ್ಮಿಣೀ ನಾಗೇಂದ್ರ ವಿವರಿಸಿದರು. ಪಾಂಡಿತ್ಯಪೂರ್ಣ ಕವಿಯಾದ ಲಕ್ಷ್ಮೀಶ ತನ್ನ ಕಾವ್ಯದಲ್ಲಿ ‘ವಿದ್ವತ್ಸಭಾವಲಯಂ ಅರಿಯೆ ವಿಚಾರಿಸಿದೆಂ’ ಎಂದು ಹೇಳಿಕೊಳ್ಳುತ್ತಾನೆ. ರಸಪರವಶತೆ, ಔಚಿತ್ಯಪೂರ್ಣ ಪದಪ್ರಯೋಗ ಹಾಗೂ ಷಟ್ಪದಿಗಳ ಝೇಂಕಾರವನ್ನು ಸಮರ್ಥವಾಗಿ ಬೆರೆಸುವ ಮೂಲಕ ಮೂಲ ಕಥೆಗಿಂತಲೂ ಹೆಚ್ಚಿನ ಕಾವ್ಯಾಕರ್ಷಣೆಯನ್ನು ಮೂಡಿಸಿದ ನಿಪುಣ ಕವಿ ಆತ ಎಂದು ಬಣ್ಣಿಸಿದರು.ಸುಶ್ರಾವ್ಯ ಗಾಯನದಿಂದ ರಂಜನೆ ಕಾರ್ಯಕ್ರಮದಲ್ಲಿ ಪ್ರೇಮಲತಾ ರಾಜೇಂದ್ರ ಅವರು ಸುಶ್ರಾವ್ಯವಾಗಿ ಗಮಕ ಗಾಯನ ಮಾಡಿ ಶ್ರೋತೃಗಳನ್ನು ರಂಜಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ. ಜಿ.ಎನ್. ಅನಸೂಯಾ ಸ್ವಾಗತಿಸಿದರು. ವಿದ್ವಾನ್ ಶೃಂಗೇರಿ ಎಸ್. ಗುರುಪ್ರಸಾದ್ ನಿರೂಪಿಸಿದರು. ದೇವಾಲಯದ ಆಡಳಿತ ಮಂಡಳಿಯ ರಮೇಶ್ ವಂದಿಸಿದರು. ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀ ಚೆನ್ನಕೇಶವ ಸ್ವಾಮಿಗೆ ಪರಶುರಾಮ ಅಲಂಕಾರ ಮಾಡಲಾಗಿತ್ತು.