ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣ ಹಾಗೂ ದುಶ್ಚಟ ಮುಕ್ತ ಸಮಾಜ ನಿರ್ಮಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡುಗೆ ಅಪಾರವಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಹೇಳಿದರು.ತಾಲೂಕಿನ ಸರಗೂರು ಹೊಸಮಠದ ಶ್ರೀಸಿದ್ದಗಂಗಾ ಡಾ.ಶಿವಕುಮಾರ ಸ್ವಾಮೀಜಿ ಪ್ರಾರ್ಥನ ಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನ ಕೇಂದ್ರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ಸರಗೂರು ಹೊಸಮಠದ ಬಸವರಾಜೇಂದ್ರ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಆಯೋಜಿಸಿದ್ದ 1836ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುಡಿತದ ಅಮಲು ಅಪರಾಧ ಕೃತ್ಯಗಳ ಹೆಚ್ಚಳಕ್ಕೆ ಕಾರಣವಾಗಿದೆ. ಮದ್ಯಪಾನದಿಂದ ಕುಟುಂಬದಲ್ಲಿ ಅಂತರಿಕ ಕಲಹ ಹೆಚ್ಚಾಗಿ, ನೆಮ್ಮದಿ ಹಾಳಾಗಲಿದೆ. ಕ್ಷಣಿಕ ಮಾತ್ರದ ಕುಡಿತದ ಅಮಲಿನಲ್ಲಿ ನಡೆದ ಗಲಾಟೆಗಳು ಇಡೀ ಜೀವನವನ್ನೇ ಸರ್ವ ನಾಶ ಮಾಡುತ್ತಿವೆ ಎಂದರು.ಯುವ ಪೀಳಿಗೆ ಈ ಬಗ್ಗೆ ಜಾಗೃತರಾಗಬೇಕು. ತಮ್ಮ ವೃತ್ತಿ ಬದುಕಿನಲ್ಲಿ ಕುಡಿತದಿಂದ ಆಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿ ದುಶ್ಚಟಗಳಿಂದ ದೂರುವಿರುವಂತೆ ಕರೆ ನೀಡಿದರು.
ದಿವ್ಯಸಾನಿಧ್ಯ ವಹಿಸಿದ್ದ ಸರಗೂರು ಮಠಾಧ್ಯಕ್ಷ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿ, ಭೂಮಿ ತಾಯಿ ಎಂದರೆ ಹೆತ್ತ ತಾಯಿ ಇದ್ದಂತೆ. ಆದರೆ, ಅದು ಕಲುಷಿತವಾಗುತ್ತಿದೆ, ಇದಕ್ಕೆ ಇತ್ತೀಚಗೆ ವಯನಾಡಿನಲ್ಲಿ ನಡೆದ ಘಟನೆ ಪ್ರತ್ಯಕ ಸಾಕ್ಷಿ. ಇಂದು ಗದ್ದೆಯಲ್ಲಿ ಯಾವುದೇ ಕೃಷಿ ಚಟುವಟಿಕೆ ಕೆಲಸ ಮಾಡಲು ಜಮೀನಿನ ಮಾಲೀಕ ಬಾಟಲು ಎಣ್ಣೆ ಕೊಟ್ಟು ಕೆಲಸ ಮಾಡಿಸುತ್ತಾನೆ ಎಂದರು.ನಾಟಿ ಮಾಡುವ ಮೊದಲು ಮದ್ಯ ಸೇವಿಸಿ ಗದ್ದೆಗೆ ಹೋಗಿ ನಾಟಿ ಮಾಡುತ್ತಿರಿ. ಇದು ಭೂಮಿ ತಾಯಿಗೆ ಮಾಡಿದ ದ್ರೋಹ, ಅವಮಾನವಾಗಿದೆ. ಅನ್ನ ಕೊಡುವ ಭೂಮಿ ತಾಯಿ ಮುನಿದರೆ ಏನಾಗಲಿದೆ ಎಂಬುದು ಇಡೀ ವಿಶ್ವಕ್ಕೆ ವಯನಾಡು ಘಟನೆ ನಿದರ್ಶನವಾಗಿದೆ ಎಂದು ಎಚ್ಚರಿಸಿದರು.
ಯೋಜನೆ ಜಿಲ್ಲಾ ನಿರ್ದೇಶಕರಾದ ಚೇತನ ಮಾತನಾಡಿ, ಸಪ್ತ ವ್ಯಸನಗಳಲ್ಲಿ ಮೊದಲ ಮೆಟ್ಟಿಲು ಕುಡಿತ. ಇದಕ್ಕೆ ಬಲಿಯಾದರೆ ಎಷ್ಟು ಸಂಪಾದನೆ ಮಾಡಿದರೂ ವ್ಯರ್ಥವಾಗಲಿದೆ. ಇಡೀ ಕುಟುಂಬ ಇದರ ಪರಿಣಾಮ ಎದುರಿಸಬೇಕಿದೆ ಎಂದರು.ಕುಡಿತ ಚಟವಿರುವವರ ಮನಃಪರಿವರ್ತನೆ ಮೂಲಕ ಮದ್ಯಪಾನ ಮುಕ್ತರನ್ನಾಗಿ ಮಾಡಲು ರಾಜ್ಯಾದ್ಯಂತ 1835 ಶಿಬಿರ ಆಯೋಜಿಸಿ ಲಕ್ಷಾಂತರ ಜನರಿಗೆ ಬೆಳಕು ನೀಡುವ ಮೂಲಕ ಅವರ ವೃತ್ತಿಗನುಸಾರವಾಗಿ ಯೋಜನೆ ಮೂಲಕ ನೆರವು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮದ್ಯವರ್ಜನ ಶಿಬಿರದ ಆಯೋಜನೆ ಕುರಿತು ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಮಾದವ ನಾಯಕ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಉಪಾಧ್ಯಕ್ಷ ಎಂ.ಎಸ್.ಶ್ರೀಕಂಠಸ್ವಾಮಿ, 1605ನೇ ಶಿಬಿರದ ಅಧ್ಯಕ್ಷರಾಗಿದ್ದ ಕೆ.ವಿ.ಸುಬ್ರಮಣ್ಯರಾಜೇ ಅರಸು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಹೇಶ್, ಸಮಿತಿ ಉಪಾಧ್ಯಕ್ಷರಾದ ಕೆ.ಎಸ್.ವೃಷಬೇಂದ್ರ, ಡಿ.ಅರ್.ನೇಮಾಂಭ, ವಿರೂಪಾಕ್ಷ, ಕೊಡಗಹಳ್ಳಿ ಮಹೇಶ್, ಯೋಜನಾಧಿಕಾರಿ ಪಾಂಡಿಯನ್, ಶಿಬಿರಾಧಿಕಾರಿ ದೇವಿ ಪ್ರಸಾದ್, ಆರೋಗ್ಯ ಸಹಾಯಕಿ ನೇತ್ರಾವತಿ, ಮೇಲ್ವಿಚಾರಕರಾದ ಚೂಡರತ್ನ, ಲಾವಣ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲ್ವಿಚಾರಕರು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.