ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಮಹಾಗಣಪತಿ ದೇವಸ್ಥಾನದ ಮಹಾದ್ವಾರ ಮತ್ತು ಮುಖಮಂಟಪ ಕಾಮಗಾರಿಗೆ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸಾಗರ
ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಮಹಾಗಣಪತಿ ದೇವಸ್ಥಾನದ ಮಹಾದ್ವಾರ ಮತ್ತು ಮುಖಮಂಟಪ ಕಾಮಗಾರಿಗೆ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀಮಹಾಗಣಪತಿ ದೇವಸ್ಥಾನ ಸಾಗರದ ಕೇಂದ್ರಬಿಂದು. ಅನೇಕ ಬಾರಿ ದೇವಸ್ಥಾನದ ಮುಖಮಂಟಪ ಕುಸಿದು ಬಿದ್ದು ಅಪಶಕುನ ಸಂಭವಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆದಿತ್ತು. ಹಾಗಾಗಿ ದೇವಸ್ಥಾನದ ಅಭಿವೃದ್ಧಿಗೆ ಸಂಕಲ್ಪ ಕೈಗೊಂಡು ಮೊದಲ ಹಂತದಲ್ಲಿ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಮಹಾದ್ವಾರ ಮತ್ತು ಮುಖಮಂಟಪ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಉದ್ಯಾನವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ೧೫ ಲಕ್ಷ ರು. ಇದೆ. ಒಟ್ಟಾರೆ ಮೊದಲ ಹಂತದಲ್ಲಿ ೬೫ ಲಕ್ಷ ರು. ವೆಚ್ಚದ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಲು ಸೂಚಿಸಿದೆ ಎಂದರು.
ಸಾಗರಕ್ಕೆ ಬರುವ ಪ್ರವಾಸಿಗರು ಒಮ್ಮೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಹೋಗುತ್ತಾರೆ. ಅಂತಹ ದೇವಸ್ಥಾನ ಸುಂದರವಾಗಿ ರೂಪುಗೊಳಿಸಬೇಕು. ದೇವಸ್ಥಾನ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ಸರ್ಕಾರದ ಅನುದಾನದ ಜೊತೆಗೆ ಸಾರ್ವಜನಿಕರು ಸಹ ದೇಣಿಗೆ ಕೊಡಲು ಸಿದ್ದರಿದ್ದಾರೆ. ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳಿಂದ ಅಭಿವೃದ್ಧಿಗೆ ಹಣ ಕೊಡಿಸಲಾಗುತ್ತದೆ. ಗಣಪತಿ ದೇವಸ್ಥಾನದ ಎದುರಿನ ಪುರಾತನ ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಸಹ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದರು.ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಮಾತನಾಡಿ, ಇತಿಹಾಸ ಪ್ರಸಿದ್ದ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಶಾಸಕರು ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಸುಮಾರು ೪ ಕೋಟಿ ರು. ಅಭಿವೃದ್ಧಿಗೆ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಶಾಸಕರ ವಿಶೇಷ ಪ್ರಯತ್ನದಿಂದ ಕಾಮಗಾರಿಗೆ ಹಣ ಮಂಜೂರಾಗಿದೆ. ದೇವಸ್ಥಾನಕ್ಕೆ ಆರ್ಥಿಕ ಸಹಕಾರ ನೀಡುವವರು ದೇವಸ್ಥಾನ ಸಮಿತಿಯನ್ನು ಭೇಟಿ ಮಾಡಬಹುದು ಎಂದು ಹೇಳಿದರು.
ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ರಶ್ಮಿ ಜೆ.ಎಚ್., ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಾರ್ಯನಿರ್ವಾಹಣಾಧಿಕಾರಿ ಪ್ರಮಿಳಾ ಕುಮಾರಿ, ಪ್ರಮುಖರಾದ ಐ.ವಿ.ಹೆಗಡೆ, ಮಧುಮಾಲತಿ, ಗಣಪತಿ ಮಂಡಗಳಲೆ, ಕುಸುಮ ಸುಬ್ಬಣ್ಣ, ಯು.ಜಿ.ಶ್ರೀಧರ್, ಕೆ.ವಿ.ಜಯರಾಮ್, ಡಿ.ದಿನೇಶ್, ಲಕ್ಷ್ಮಣ್ ಜೋಯಿಸ್, ಕೃಷ್ಣಮೂರ್ತಿ ಇನ್ನಿತರರು ಹಾಜರಿದ್ದರು.