ಸಾರಾಂಶ
ಉಭಯ ಶ್ರೀಪಾದರಿಗೂ ಪರ್ಯಾಯ ಮಠದ ವತಿಯಿಂದ ಶಾಲು ಹೊದಿಸಿ ಭಗವದ್ಗೀತಾ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಶುಕ್ರವಾರ ಜೋಧಪುರದ ಪೂಜ್ಯ ಶ್ರೀ ಮಹೇಶ್ವರಾನಂದ ಪುರಿ ಸ್ವಾಮೀಜಿ ತಮ್ಮ ಶಿಷ್ಯ ಶ್ರೀ ಅವತಾರ ಪುರಿ ಸ್ವಾಮೀಜಿ ಜೊತೆಗೆ ಶ್ರೀಕೃಷ್ಣಮಠಕ್ಕೆ ಆಗಮಿಸಿ ಶ್ರೀ ಕೃಷ್ಣನ ದರ್ಶನ ಪಡೆದರು.ಶ್ರೀಕೃಷ್ಣ ದರ್ಶನದ ಬಳಿಕ ಗೀತಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಪೂಜ್ಯ ಮಹೇಶ್ವರಾನಂದ ಸ್ವಾಮೀಜಿ ಮಾತಾಡುತ್ತಾ, ಪುತ್ತಿಗೆ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞ ಆಂದೋಲನವನ್ನು ವಿಶೇಷವಾಗಿ ಮೆಚ್ಚಿಕೊಂಡರು.
ಈ ಸಂದರ್ಭ ಪೂಜ್ಯ ಪುತ್ತಿಗೆ ಶ್ರೀಪಾದರು ಜಾಗತಿಕ ಶಾಂತಿ ಸಮ್ಮೇಳನ ಸಭೆಗಾಗಿ ಯುರೋಪಿನ ವಿಯೆನ್ನಾ ದೇಶಕ್ಕೆ ತೆರಳಿದಾಗ ಶ್ರೀ ಮಹೇಶ್ವರಾನಂದ ಅವರ ಆಶ್ರಮದಲ್ಲಿಯೇ ತಂಗಿದ್ದನ್ನು ನೆನಪಿಸಿಕೊಂಡರು.ಉಭಯ ಶ್ರೀಪಾದರಿಗೂ ಪರ್ಯಾಯ ಮಠದ ವತಿಯಿಂದ ಶಾಲು ಹೊದಿಸಿ ಭಗವದ್ಗೀತಾ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಶ್ರೀಮಠದ ವಿಶೇಷ ಭಕ್ತರಾದ ನಾಡಿನ ಖ್ಯಾತ ನೇತ್ರತಜ್ಞ ಕೃಷ್ಣಪ್ರಸಾದ್ ಸ್ವಾಗತಿಸಿದರು. ಶ್ರೀ ಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು.ಶ್ರೀ ಮಹೇಶ್ವರಾನಂದ ಸ್ವಾಮೀಜಿ, ಜಗತ್ತಿನಾದ್ಯಂತ ಯೋಗ ಮತ್ತು ಸನಾತನ ಧರ್ಮ ಪ್ರಚಾರ ಮಾಡುತ್ತಾ ದೇಶ, ವಿದೇಶಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿರುತ್ತಾರೆ. ಅಲ್ಲದೇ ಅವರು ಜೋಧಪುರದಲ್ಲಿ ಓಂಕಾರದ ಮಾದರಿಯಲ್ಲಿಯೇ ಅತ್ಯಾಕರ್ಷಕವಾಗಿ ಬೃಹತ್ ಮಂದಿರ ನಿರ್ಮಾಣ ಮಾಡಿ ವಿಖ್ಯಾತರಾಗಿದ್ದಾರೆ.