ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರವಿಶ್ವ ಬಂಧುತ್ವದ ಮಾನವೀಯ ವೈಶಾಲ್ಯಗಳನ್ನು ಸಾರಿದ ವೀರಶೈವ ಧರ್ಮದ ಸಂಸ್ಥಾಪನಾಚಾರ್ಯ ಶ್ರೀ ರೇಣುಕಾಚಾರ್ಯರ ಜೀವನ, ತತ್ವ ಸಿದ್ಧಾಂತಗಳು ಸುಖ ಶಾಂತಿಯ ಬದುಕಿಗೆ ಮೂಲ ಸೆಲೆಯಾಗಿವೆ ಎಂದು ಮುಡುಕುತೊರೆ ತೋಪಿನ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ವಾಸವಿ ಮಹಲ್ ನಲ್ಲಿ ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಮತ್ತು ಗೌರವ ಗುರು ರಕ್ಷೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.ಕರ್ಮವನ್ನು ಕಳೆದು ಧರ್ಮವನ್ನು ಭಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ, ಜಾತಿ ಮತ ಪಂಥಗಳ ಗಡಿ ಮೀರಿ ತನು ಮನ ಶುದ್ಧಿಗೆ ಆದರ್ಶ ಮೌಲ್ಯಗಳ ಪರಿಪಾ ಲನೆ ಮಹತ್ವವನ್ನು ಸಾರಿದ ಶ್ರೇಯಸ್ಸು ಶ್ರೀ ರೇಣುಕಾಚಾರ್ಯರದು ಎಂದರು.
ಚಾಮರಾಜನಗರ ಹಾಲು ಒಕ್ಕೂಟ (ಕುದೇರು)ದ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಮಾತನಾಡಿದರು. ವಿಶ್ವ ಮಹಿಳಾ ಖೋ ಖೋ ಚಾಂಪಿಯನ್ ಬಿ. ಚೈತ್ರಾ ಅವರನ್ನು ಸನ್ಮಾನಿಸಲಾಯಿತು. ಪಟ್ಟಣದಲ್ಲಿ 3 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಜಗದ್ಗುರು ರೇಣುಕಾ ಚಾರ್ಯ ಸಭಾಭವನದ ನೀಲ ನಕ್ಷೆಯನ್ನು ಹರಗುರು ಚರಮೂರ್ತಿಗಳು ಹಾಗು ಗಣ್ಯರು ಬಿಡುಗಡೆ ಮಾಡಿದರು.ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಕೆ.ಎಂ. ಮಲ್ಲಿಕಾರ್ಜುನ ಸ್ವಾಮಿಯವರು ಸಭಾ ಭವನ ನಿರ್ಮಾಣ ಕಾರ್ಯಕ್ಕೆ 1.08 ಲಕ್ಷ ರು. ಗಳ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರೆ, ಚಾಮರಾಜನಗರ ಹಾಲು ಒಕ್ಕೂಟದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಒಂದು ಕೊಠಡಿ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದರು. ಪಿಯುಸಿ ಪರೀಕ್ಷೆಯಲ್ಲಿ ಹೆಚ್ವು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಶರಣ್ಯ, ಮೋನಿಷಾ ಹಾಗೂ ಸ್ವರ್ಣಗೌರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಾನ್ನಿಧ್ಯವನ್ನು ತ್ರೈಂಬಕೇಶ್ವರ ಮಠದ ಶ್ರೀ ವೀರೇಶ, ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ವಾಟಾಳು ಸೂರ್ಯ ಸಿಂಹಾಸನಮಠದ ಸಿದ್ದಲಿಂಗಶಿವಾಚಾರ್ಯ ಸ್ವಾಮಿ ಸಮ್ಮುಖ ವಹಿಸಿದ್ದರು. ಸಿದ್ದರಹಳ್ಳಿಪಾರ ಮಾರ್ಥಿಕ ಗವಿ ಮಠದ ಮಲ್ಲಿಕಾರ್ಜುನ ಸ್ವಾಮಿ, ಹೊಸೂರುಹುಂಡಿ ಮಠದ ರಾಜಶೇಖರ ಸ್ವಾಮಿ, ಕೀಲು ಮತ್ತು ಮೂಳೆ ತಜ್ಞ ಡಾ.ಎಸ್. ಮಹದೇವಪ್ರಸಾದ್, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾನಿಲಯದ ಪ್ರಾದ್ಯಾಪಕಿ ಡಾ.ಎಚ್.ಆರ್. ಚನ್ನಮ್ಮ,ನೆಲ ಮಂಗಲ ಟೌನ್ ರುದ್ರೇಶ್ವರ ಸ್ವಾಮಿ ದೇವಾಲಯ ದತ್ತಿ ಸಮಿತಿ ಧರ್ಮದರ್ಶಿ ಎನ್. ಗಂಗರಾಜು ಇದ್ದರು.