ಸಾರಾಂಶ
ಕಡೂರು, ತಾಲೂಕಿನ ಇತಿಹಾಸ ಪ್ರಸಿದ್ಧ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮುದ್ರೆ ಅಯ್ಯನೋರು ಪೂಜಾರರಿಂದ 9 ವರ್ಷಕ್ಕೊಮ್ಮೆ ಗರ್ಭಗುಡಿಗೆ ಸಾಂಪ್ರಾದಾಯಿಕ ಪದ್ಧತಿಯಂತೆ ಪ್ರವೇಶ
ಕನ್ನಡಪ್ರಭ ವಾರ್ತೆ, ಕಡೂರುತಾಲೂಕಿನ ಇತಿಹಾಸ ಪ್ರಸಿದ್ಧ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪಿ. ಕೋಡಿಹಳ್ಳಿ ಗ್ರಾಮದಿಂದ ಮೂಲ್ವಿಕರ ಮೂರು ಬಂಡಿಗಳು ಹಾಗು ಗ್ರಾಮ ದೇವತೆಯರ ಆಗಮನದ ಹಿನ್ನಲೆಯಲ್ಲಿ ಬಾಯಿ ಬೀಗ ಹಾಕಿಕೊಂಡ ಸಾವಿರಾರು ಮಹಿಳೆಯರು ಕೆಂಡ ಹಾಯುವ ಮೂಲಕ ಸ್ವಾಮಿ ದರ್ಶನ ಪಡೆದರು. ಬಳಿಕ ಪುರದ ಮಲ್ಲಿಕಾರ್ಜುನ ಸ್ವಾಮಿ ವ್ಯವಸ್ಥಾಪನಾ ಸಮಿತಿಯಿಂದ ಉಪವಾಸ ವ್ರತ ಕೈಗೊಂಡಿದ್ದ ಮಹಿಳೆಯರಿಗೆ ಫಲಹಾರ ವಿತರಿಸ ಲಾಯಿತು. ಮೂಲ್ವೀಕರ ಮುದ್ರೆ ಅಯ್ಯನೋರು ಪೂಜಾರರಿಂದ 9 ವರ್ಷಕ್ಕೊಮ್ಮೆ ಗರ್ಭಗುಡಿಗೆ ಸಾಂಪ್ರಾದಾಯಿಕ ಪದ್ಧತಿಯಂತೆ ಪ್ರವೇಶ ಮಾಡಿ ಮೂಲ ಉದ್ಭವ ಲಿಂಗಕ್ಕೆ ವಿಶೇಷ ರುದ್ರಾಭಿಷೇಕ, ನೈವೇದ್ಯ ಸಂಕಲ್ಪ ಸೇವೆ ನೆರವೇರಿಸಲಾಯಿತು. ಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಗಜಾರೋಹಣೋತ್ಸವ ಮತ್ತು ಕೃಷ್ಣ ಗಂಧೋತ್ಸವ ಸಾಂಪ್ರದಾಯಿಕ ಉತ್ಸವ ನಡೆದವು. ಆನಂತರ ಪಿ. ಕೋಡಿಹಳ್ಳಿ ಮೂಲ್ವೀಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಯನ್ನು ರಥದ ಮಂಟಪಕ್ಕೆ ಕರೆತಂದು ಅಲಂಕೃತ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಬಲಿಪೂಜೆ ಬಳಿಕ ಮಧ್ಯಾಹ್ನ 2ಗಂಟೆಗೆ ನೆರೆದಿದ್ದ ಸಹಸ್ರಾರು ರಥ ಎಳೆದು ಸಂಭ್ರಮಿಸಿದರು.ರಥ ಎಳೆವ ಸಂದರ್ಭದಲ್ಲಿ ಭಕ್ತರು ಮಲ್ಲಪ್ಪನಿಗೆ ಜೈಕಾರ ಕೂಗುತ್ತಾ ಈ ಬಾರಿ ತಾಲೂಕಿಗೆ ಸಮೃದ್ಧ ಮಳೆ-ಬೆಳೆ ಕರುಣಿಸು ವಂತೆ ಪ್ರಾರ್ಥಿಸಿ ಬಾಳೆಹಣ್ಣುಗಳನ್ನು ಎಸೆದರೆ, ವೈಯಕ್ತಿಕ ಹರಕೆ ಕಟ್ಟಿಕೊಂಡ ಭಕ್ತರು ಮಂಡಕ್ಕಿಜತೆಗೆ ಮೆಣಸಿನ ಕಾಳನ್ನು ರಥಕ್ಕೆ ಎರಚಿ ತಮ್ಮ ಭಕ್ತಿ ಸಮರ್ಪಿಸಿದರು.ರಥದ ಬಳಿ ಎರಚಿದ್ದ ಮೆಣಸಿನ ಕಾಳನ್ನು ರೈತರು ಮುಗಿಬಿದ್ದು ಸಂಗ್ರಹಿಸುತ್ತಿದ್ದ ದೃಶ್ಯ ಕಂಡು ಬಂದಿತು. ಸಂಗ್ರಹಿಸಿದ ಮೆಣಸಿನಕಾಳನ್ನು ಮನೆಗಳಲ್ಲಿ ಪೂಜೆ ಸಲ್ಲಿಸಿ ತಮ್ಮ ಹೊಲ-ತೋಟಗಳಿಗೆ ಸಮೃದ್ಧ ಪೈರು ಬೆಳೆಸಲು ಮಲ್ಲಪ್ಪನ ಕೃಪೆ ದೊರಕಿದೆ ಎಂಬ ನಂಬಿಕೆಯಿಂದ ತೆಗೆದುಕೊಂಡರು.ರಥೋತ್ಸವದ ನಂತರ ಪಿ.ಕೋಡಿಹಳ್ಳಿ ಮೂಲ್ವೀಕರಿಂದ ಹಾಗೂ ಗ್ರಾಮೀಣ ಭಾಗದ ಭಕ್ತರು ತಮ್ಮ ಸಿಂಗಾರಗೊಂಡ ಪಾನಕದ ಗಾಡಿಗಳನ್ನು ಸ್ವಾಮಿ ದೇವಾಲಯದವರೆಗೆ ಮೆರವಣಿಗೆ ನಡೆಸಿ ನಂತರ ರಥದ ಬಳಿ ಬಂದು ಸಾಂಪ್ರಾದಾಯಿಕ ವಾಗಿ ಮೂರು ಸುತ್ತು ಪ್ರದಕ್ಷಿಣೆಹಾಕಿ ಸಂಭ್ರಮಿಸಿದರು. ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಯಗಟಿಪುರ ಪ್ರಸನ್ನ ಮಾತನಾಡಿ ಪಿ.ಕೋಡಿಹಳ್ಳಿ ಮೂಲ್ವೀಕರ ಭಕ್ತರ 9 ವರ್ಷಕ್ಕೊಮ್ಮೆ ನಡೆವ ಬಾಯಿ ಬೀಗ ಜಂಪ ಮಹೋತ್ಸವದ ಅಂಗವಾಗಿ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿದ್ದರು ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮಾ ತಾಲೂಕು ಆಡಳಿತದ ಪರವಾಗಿ ರಥಕ್ಕೆ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ಮೂಲ್ವಿಕರ ಜಂಪ ಮಹೋತ್ಸವ ಸಮಿತಿಯಿಂದ ದಾಸೋಹ ಹಾಗು ಸೂಕ್ತ ಪೊಲೀಸ್ ಬಂದ್‌ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. 13ಕೆಕೆಡಿಯು2.ಕಡೂರು ತಾಲೂಕಿನ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.