ಹೊನ್ನಾಳಿ ಪಟ್ಟಣದ ಐತಿಹಾಸಿಕ ಮಾರಿಕಾಂಬ ಜಾತ್ರೆಯನ್ನು ಆಗಸ್ಟ್4 ರಿಂದ 6 ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ಹಾಗೂ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಮಾರಿಕಾಂಬದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಧರ್ಮಪ್ಪ ಎಚ್.ಎ. ತಿಳಿಸಿದ್ದಾರೆ.

- ಜಾತ್ರೆ ಯಶಸ್ವಿಗೆ ಹಲವು ಸಮಿತಿಗಳ ರಚನೆ । ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಐತಿಹಾಸಿಕ ಮಾರಿಕಾಂಬ ಜಾತ್ರೆಯನ್ನು ಆಗಸ್ಟ್4 ರಿಂದ 6 ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ಹಾಗೂ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಮಾರಿಕಾಂಬದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಧರ್ಮಪ್ಪ ಎಚ್.ಎ. ತಿಳಿಸಿದರು.

ಮಂಗಳವಾರ ಪಟ್ಟಣದ ಮಾರಿಕಾಂಬ ದೇವಾಸ್ಥಾನದಲ್ಲಿ ಜಾತ್ರೆ ಹಿನ್ನೆಲೆ ಗ್ರಾಮದ ಮುಖಂಡರು ಸೇರಿ ಚಪ್ಪರ ಪೂಜೆ (ಪೆಂಡಾಲ್) ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಆಷಾಢ ಮಾಸದಲ್ಲಿ ನಡೆಯುವ ಮಾರಿಕಾಂಬ ದೇವಿಯ ಜಾತ್ರೆಯನ್ನು ನಗರದ ನಾಗರಿಕರು, ಸಮಿತಿ ಪದಾಧಿಕಾರಿಗಳು, ಶ್ರೀದೇವಿಯ ಸಕಲ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮನವಿ ಮಾಡಿದರು.

ಈ ಬಾರಿ ಅತ್ಯಂತ ಯಶಸ್ವಿ ಮಾರಿಕಾಂಬ ಜಾತ್ರೆ ಎನಿಸುವಂತೆ ನಡೆಯಬೇಕು. ಇದು ಎಲ್ಲರೂ ಪಾಲ್ಗೊಂಡಾಗ ಮಾತ್ರ ಸಾಧ್ಯ. ಜಾತ್ರೆಯನ್ನು ಅಚ್ಚುಕಟ್ಟಾಗಿ, ಗೊಂದಲಗಳಿಲ್ಲದೇ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ನಡೆಸಬೇಕು. ಈ ಉದ್ದೇಶದಿಂದ ಹಲವು ಸಮಿತಿಗಳನ್ನು ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಹಿರಿಯರು, ಯುವಕರು ಸೇರಿದಂತೆ ಎಲ್ಲರೂ ಇರುತ್ತಾರೆ ಎಂದರು.

ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಆ.4ರ ಮಂಗಳವಾರ ಮಾರಿಕಾಂಬ ದೇವಿ ಮೆರವಣಿಗೆ ಪಟ್ಟಣದ ಕುಂಬಾರ ಬೀದಿಯ ಶ್ರೀ ದುರ್ಗಾಂಬಿಕ ದೇವಸ್ಥಾನದಿಂದ ಡೊಳ್ಳು, ಭಜನೆ ಮಂಗಳವಾದ್ಯಗಳೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ಬಳಿಕ ಶ್ರೀ ಹಳದಮ್ಮ ದೇವಿ ದೇವಸ್ಥಾನ ಹಿಂಭಾಗದ ಶ್ರೀ ಮಾರಿಕಾಂಬ ದೇವಿ ಗದ್ದುಗೆಯಲ್ಲಿ ಗದ್ದುಗೆಗೊಳಿಸಲಾಗುತ್ತದೆ. ಮಹಾಮಂಗಳಾರತಿ ನಂತರ ಹುಲುಸಿನ ಜೋಳ ಹಾಕುವುದು, ಆ.5ರ ಬುಧವಾರ ಸಂಜೆ 5 ಗಂಟೆಗೆ ಗಾವುಮರಿ ತರುವುದು, ಹುಲುಸಿನ ಜೋಳ ಒಡೆಯುವುದು ಹಾಗೂ ಅಸಾದಿ ಹೊಗಳಿಕೆ ಸಾಂಪ್ರದಾಯಕ ಕಾರ್ಯ ನೆರವೇರಲಿದೆ ಎಂದರು.

ಆ.6ರ ಗುರುವಾರ ಮಧ್ಯಾಹ್ನ ಮಾರಿಕಾಂಬ ದೇವಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮಹಾಮಂಗಳಾರತಿಯೊಂದಿಗೆ ನಗರದ ರಾಜಬೀದಿಗಳಲ್ಲಿ ಡೊಳ್ಳು, ಭಜನೆ, ಕೋಲಾಟ, ಕೀಲು ಕುದುರೆ, ನೃತ್ಯ, ಸಂಗೀತ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಂಡಗಳ ಜತೆ ಭವ್ಯ ಮೆರವಣಿಗೆ ನಡೆಯಲಿದೆ. ಈ ನಡುವೆ ಆ.3ರಂದು ಸಂಜೆ 7 ಗಂಟೆಗೆ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಯಜಮಾನರಾದ ಎಚ್.ಎ.ರಾಜಪ್ಪ, ಮಾದಪ್ಪ, ಮಾಲಿಗೌಡ್ರು, ಬುದ್ದಿವಂತರ ರಮೇಶ್, ನರಸಿಂಹಪ್ಪ ಬುದ್ದಿವಂತರ, ಗೌಡ್ರ ಗಾಳೇಶ್, ಶಿವಶಂಕರ್, ಎಚ್.ಎ.ಉಮಾಪತಿ, ನರಸಪ್ಪ, ಚಾಟಿ ಪುಟ್ಟಪ್ಪ, ಮುಖಂಡರಾದ ವಿಜೇಂದ್ರಪ್ಪ, ಪುಟ್ಟಪ್ಪ, ಗುಂಡ, ರೇವಣಸಿದ್ದಪ್ಪ ಮೂಲಿ, ಸತೀಶ್, ರವಿ, ಎಚ್.ಎಂ. ಅರುಣ್‌ಕುಮಾರ್, ವಿಜಯಗೌಡ, ರಾಜೇಂದ್ರ, ಪ್ರಧಾನ ಅರ್ಚಕ ಮಾಲತೇಶಾಚಾರ್ ಹಾಗೂ ಇತರರು ಇದ್ದರು.

- - -

-30ಎಚ್.ಎಲ್.ಐ1: ಮಾರಿಕಾಂಬ ಜಾತ್ರೆ ಹಿನ್ನೆಲೆ ಮಂಗಳವಾರ ಚಪ್ಪರ ಪೂಜೆ ನೆರವೇರಿಸಲಾಯಿತು.