ಶ್ರೀ ನೀಲಕಂಠೇಶ್ವರಸ್ವಾಮಿ ಮಂಡಲಪೂಜಾ ಮುಕ್ತಾಯ

| Published : Oct 09 2024, 01:39 AM IST

ಸಾರಾಂಶ

Sri Neelakantheswaraswamy Mandal Puja ends

- ಶ್ರೀ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ವಿವಿಧ ಕುಟುಂಬದಿಂದ 45 ದಿನಗಳ ಕಾಲ ನಡೆದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ತಳಕು ಹೋಬಳಿಯ ಕಾಲುವೇಹಳ್ಳಿ ಗ್ರಾಮದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಳಸ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಂಡಲ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಕಳೆದ ತಿಂಗಳಷ್ಟೇ ನೀಲಕಂಠೇಶ್ವರಸ್ವಾಮಿ ದೇವಸ್ಥಾನದ ಗೋಪುರ ಕಳಸ ಪ್ರತಿಷ್ಠಾಪನೆ ನಡೆದಿದ್ದು, ಸೂರ್ಯೋದಯಕ್ಕೂ ಮುನ್ನ 45 ದಿನಗಳ ಕಾಲ ವಿವಿಧ ಕುಟುಂಬಗಳಿಂದ ಪೂಜೆ, ಅಭಿಷೇಕ, ಎಲೆಪೂಜೆ ಮುಂತಾದ ದೇವತಾ ಕಾರ್ಯಗಳನ್ನು ನಡೆಸಲಾಗಿದೆ.

ಮಂಡಲಪೂಜಾ ಮಹೋತ್ಸವ ಕಾರ್ಯಕ್ರಮ ಅಂತ್ಯಗೊಂಡು, ಅಂತಿಮ ದಿನವಾದ 49ನೇ ದಿನ ಗ್ರಾಮದ ಎಲ್ಲಾ ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಗಂಗಾ ಪೂಜೆ, ಮಹಾಗಣಪತಿ ಪೂಜೆ, ಪಂಚಕಳಸ ಪೂಜೆ, ರುದ್ರಾಭಿಷೇಕ, ಗಣಹೋಮ, ಮೃತ್ಯುಂಜಯಹೋಮ, ನವಗ್ರಹ ಪೂಜೆ, ರುದ್ರಹೋಮ, ಜಯಾದಿಹೋಮ ಮುಂತಾದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ವಿಶೇಷವೆಂದರೆ ಗ್ರಾಮಸ್ಥರೆಲ್ಲಾ ಸೇರಿ ಏಕಕಾಲದಲ್ಲೇ ಕಾಳಿಕಾದೇವಿ, ಆಂಜನೇಯಸ್ವಾಮಿ, ಪಾಲನಾಯಕಸ್ವಾಮಿ ದೇವಾಲಯಗಳಲ್ಲಿ ಮಹಾಮಂಗಳಾರತಿ, ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು.

ವಿದ್ವಾನ್ ಡಾ. ಪಂಡಿತ್‌ ವೀರೇಶ್‌ ಹಿರೇಮಠ ಮಾತನಾಡಿ, ಗ್ರಾಮದ ಜನರ ಕಲ್ಯಾಣಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ನೀಲಕಂಠೇಶ್ವರಸ್ವಾಮಿ ದೇವಾಲಯದಲ್ಲಿ 45 ದಿನಗಳ ವಿಶೇಷ ಪೂಜೆ ಹಮ್ಮಿಕೊಂಡು ಸಮೃದ್ಧ ಮಳೆ, ಬೆಳೆಗೆ ಶ್ರೀಸ್ವಾಮಿಯನ್ನು ಪ್ರಾರ್ಥಿಸಿದೆ. ಗ್ರಾಮೀಣ ಭಾಗದ ಜನರಿಗೆ ದೇವರ ಮೇಲೆ ಇರುವ ಅಪಾರ ಭಕ್ತಿ, ಗೌರವ, ನಂಬಿಕೆ ಕಂಡು ಸಂತೋಷವಾಗಿದೆ ಎಂದರು.

ಪ್ರತಿಯೊಬ್ಬರೂ ಶ್ರದ್ಧಾ, ಭಕ್ತಿಯಿಂದ ಪೂಜಾ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ. ಎಲ್ಲಿ ದೇವರ ಮಂಗಳ ಕಾರ್ಯ ನಡೆಯುತ್ತದೋ ಅಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.

ಗ್ರಾಮದ ಮುಖಂಡರಾದ ರೇಣುಕಾಸ್ವಾಮಿ, ಜಯಪಾಲಯ್ಯ, ಕೆ.ಪಿ. ಭೂತಯ್ಯ, ಜಾಜೂರು ಹನುಮಂತಪ್ಪ, ರಂಗಸ್ವಾಮಿ, ಶ್ರೀನಿವಾಸ್, ಡಿ.ಆರ್. ತಿಮ್ಮಣ್ಣ, ಕೆ.ಒ. ಪಾಲಯ್ಯ, ಮುಂತಾದವರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

-----

೭ಸಿಎಲ್‌ಕೆ೨: ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಮಂಡಲಪೂಜಾ ಕಾರ್ಯಕ್ರಮ.

-----

೭ಸಿಎಲ್‌ಕೆ೦೨: ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದ ಶ್ರೀ ನೀಲಕಂಠೇಶ್ವರಸ್ವಾಮಿಗೆ ಪ್ರತಿಮನೆಯಿಂದ 45 ದಿನಗಳ ಕಾಲ ಗ್ರಾಮಸ್ಥರು ಪೂಜೆ ನಡೆಸಿದರು.