ಮಂಡ್ಯ ಜಿಲ್ಲಾದ್ಯಂತ ಶ್ರದ್ಧಾ-ಭಕ್ತಿಯಿಂದ ಶ್ರೀರಾಮನವಮಿ ಆಚರಣೆ

| Published : Apr 07 2025, 12:37 AM IST

ಮಂಡ್ಯ ಜಿಲ್ಲಾದ್ಯಂತ ಶ್ರದ್ಧಾ-ಭಕ್ತಿಯಿಂದ ಶ್ರೀರಾಮನವಮಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನಾಚರಣೆಯನ್ನು ಮಂಡ್ಯ ಜಿಲ್ಲೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಭಾನುವಾರ ಆಚರಿಸಲಾಯಿತು. ಶ್ರೀರಾಮ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಕೋಸಂಬರಿ, ಬೆಲ್ಲದ ಪಾನಕ, ಮಜ್ಜಿಗೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನಾಚರಣೆಯನ್ನು ಜಿಲ್ಲೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಭಾನುವಾರ ಆಚರಿಸಲಾಯಿತು. ಶ್ರೀರಾಮ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಕೋಸಂಬರಿ, ಬೆಲ್ಲದ ಪಾನಕ, ಮಜ್ಜಿಗೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.

ನಗರದ ನೆಹರುನಗರ ಬಡಾವಣೆಯಲ್ಲಿರುವ ಶ್ರೀರಾಮಮಂದಿರದಲ್ಲಿ ಶ್ರೀ ರಾಮ ಭಜನಾ ಸಭಾ ವತಿಯಿಂದ ೪೨ನೇ ವರ್ಷದ ಶ್ರೀ ರಾಮನವಮಿ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗಿ ಏ. 15 ರವರೆಗೆ ನಡೆಯಲಿದೆ.

ನೆಹರು ನಗರದ ರಾಮಮಂದಿರದಲ್ಲಿ ಪ್ರಾರಂಭವಾಗುವ ರಾಮೋತ್ಸವದಲ್ಲಿ ಬೆಳಗಿನಿಂದಲೇ ದೇವರಿಗೆ ವಿಶೇಷ ಪೂಜೆ, ಹೋಮ, ಹವನ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ೬.೩೦ಕ್ಕೆ ದೇವರಿಗೆ ಪಂಚಾಮೃತ ಅಭಿಷೇಕ, ವೇದಪಾರಾಯಣ, ಷೋಡಶೋಪಚಾರ ಪೂಜೆ, ಮಹಾಮಂಗಳಾರತಿ ನಡೆಯಿತು. ಬಳಿಕ ಪ್ರಸಾದ ವಿನಿಯೋಗ ನಡೆಯಿತು.

ನಗರದ ಪೇಟೆಬೀದಿಯಲ್ಲಿರುವ ಶ್ರೀರಾಮ ಸಭಾ ವತಿಯಿಂದ ಶ್ರೀರಾಮ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಶ್ರೀ ಕೋದಂಡರಾಮನಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆಗಳು ನಡೆದವು. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಡೆಯಿತು. ಬಳಿಕ ಭಕ್ತಾದಿಗಳಿಗೆ ವಿಶೇಷ ಪ್ರಸಾದ ವಿತರಿಸಲಾಯಿತು.

ಗಾಂಧಿ ನಗರದಲ್ಲಿರುವ ಶ್ರೀರಾಮ ದೇವಸ್ಥಾನ ಮಂಡಳಿ ವತಿಯಿಂದ ಶ್ರೀ ರಾಮೋತ್ಸವದ ಪ್ರಯುಕ್ತ ಎರಡು ದಿನಗಳಿಂದ ರಾಮೋತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು. ಇಂದೂ ಸಹ ದೇವರಿಗೆ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಿ ಸಾರ್ವಜನಿಕರಿಗೆ ಪಾನಕ ಮಜ್ಜಿಗೆಯನ್ನು ವಿತರಿಸಲಾಯಿತು.

ಮಂಡ್ಯ ನಗರದ ರೈಲ್ವೆನಿಲ್ದಾಣ ಬಳಿ ಇರುವ ಶ್ರೀ ವೀರಾಂಜನೇಯ ದೇವಾಲಯ ಸಮಿತಿ ಪದಾಧಿಕಾರಿಗಳು ಮತ್ತು ಕರವೇ ತಾಲೂಕು ಘಟಕದಿಂದ ಸಾರ್ವಜನಿಕರುಗೆ ಮಜ್ಜಿಗೆ-ಪಾನಕ, ಕೊಸಂಬರಿ ವಿರತರಿಸಿದರು. ಕಾರ್ಯಕ್ರಮದಲ್ಲಿ ಕರವೇ ತಾಲೂಕು ಘಟಕ ಅಧ್ಯಕ್ಷ ಡಿ.ಅಶೋಕ್, ಮುಖಂಡರಾದ ಟಿ. ಮಂಜುನಾಥ್, ಕರವೇ ಸಂಘಟನೆಯ ಕಾಂತರಾಜು, ಸ್ವಾಮಿ, ಸೌಂದರ್ಯರಾಜ್, ಶ್ರೀನಿವಾಸ್ ಮತ್ತಿತರರಿದ್ದರು.

ವಿವಿಧೆಡೆ ಆಚರಣೆ:

ಚಿನ್ಮಯ ಮಿಷನ್ ವತಿಯಿಂದ ಚಿನ್ಮಯ ರಾಮಮಂದಿರದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ವಸತಿಗೃಹದ ಆವರಣದಲ್ಲಿರುವ ಶ್ರೀರಾಮ ಮಂದಿರ, ಮಂಡ್ಯದ ಸ್ವರ್ಣಸಂದ್ರ, ಗುರುಮಠ, ಹರಿಶ್ಚಂದ್ರ ವೃತ್ತ, ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ, ವಿ.ವಿ.ರಸ್ತೆ, ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ನಗರದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಬೆಳಗ್ಗೆಯಿಂದಲೇ ಶ್ರೀರಾಮನವಮಿ ಸಂಭ್ರಮ ಮನೆ ಮಾಡಿತ್ತು. ವಿವಿಧ ಯುವಕ-ಸಂಘಗಳ ಮುಖಂಡರು ಅಲ್ಲಲ್ಲಿ ರಾಮನವಮಿ ಆಚರಿಸಿದರು. ಈ ವೇಳೆ ಭಕ್ತರು, ಸಾರ್ವಜನಿಕರಿಗೆ ನೀರು ಮಜ್ಜಿಗೆ, ಬೆಲ್ಲದ ಪಾನಕ, ಹೆಸರುಬೇಳೆ ಕೋಸಂಬರಿ ವಿತರಿಸಲಾಯಿತು.