ಶ್ರೀರಾಮನವಮಿ ಹಬ್ಬದ ಅಂಗವಾಗಿ ಪತಂಜಲಿ ಯೋಗ ಪರಿವಾರ್‌ ಹಾಗೂ ವೇದಭಾರತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗೌರಿಕೊಪ್ಪಲು ಸಮುದಾಯ ಭವನದಲ್ಲಿರುವ ಶ್ರೀ ವಿನಾಯಕ ಯೋಗಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ಭಕ್ತಿಭಾವದಿಂದ ಸಾಮೂಹಿಕ ಯಜ್ಞ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಇದೇ ಸಂದರ್ಭದಲ್ಲಿ ಬಾಬಾ ರಾಮದೇವ್ ಅವರ ಸನ್ಯಾಸ ದೀಕ್ಷಾ ದಿನವನ್ನೂ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀರಾಮನವಮಿ ಹಬ್ಬದ ಅಂಗವಾಗಿ ಪತಂಜಲಿ ಯೋಗ ಪರಿವಾರ್‌ ಹಾಗೂ ವೇದಭಾರತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗೌರಿಕೊಪ್ಪಲು ಸಮುದಾಯ ಭವನದಲ್ಲಿರುವ ಶ್ರೀ ವಿನಾಯಕ ಯೋಗಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ಭಕ್ತಿಭಾವದಿಂದ ಸಾಮೂಹಿಕ ಯಜ್ಞ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಇದೇ ಸಂದರ್ಭದಲ್ಲಿ ಬಾಬಾ ರಾಮದೇವ್ ಅವರ ಸನ್ಯಾಸ ದೀಕ್ಷಾ ದಿನವನ್ನೂ ಆಚರಿಸಲಾಯಿತು.ಬೆಳಿಗ್ಗೆ ಆರಂಭವಾದ ಕಾರ್ಯಕ್ರಮದಲ್ಲಿ ವೇದ ಮಂತ್ರೋಚ್ಛಾರಣೆಗಳ ನಡುವೆ ಯಜ್ಞ ನೆರವೇರಿದ ದೃಶ್ಯ ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆಗಳನ್ನು ಮೂಡಿಸಿತು. ಸುಮಾರು ೨೦೦ಕ್ಕೂ ಹೆಚ್ಚು ಯೋಗಸಾಧಕರು ಹಾಗೂ ಭಕ್ತರು ಯಜ್ಞದಲ್ಲಿ ಭಾಗವಹಿಸಿ ಸಮಿತ್ತನ್ನು ಸಮರ್ಪಿಸುವ ಮೂಲಕ ಧಾರ್ಮಿಕ ಆಚರಣೆಗೆ ಸಾಥ್ ನೀಡಿದರು. ಸಮೂಹ ಯಜ್ಞದ ಮೂಲಕ ಸಮಾಜದಲ್ಲಿ ಶಾಂತಿ, ಆರೋಗ್ಯ ಹಾಗೂ ಸದ್ಭಾವನೆ ವೃದ್ಧಿಯಾಗಲಿ ಎಂಬ ಪ್ರಾರ್ಥನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಪರಮೇಶ್ವರ ಸುಪರ್ಣಸಾ ಮತ್ತು ವೇದಭಾರತಿಯ ಸಂಯೋಜಕರಾದ ಹರಿಹರಪುರ ಶ್ರೀಧರ್‌ ಅವರು ಮಾತನಾಡಿ, ಶ್ರೀರಾಮನ ಆದರ್ಶ ಜೀವನ, ಧರ್ಮನಿಷ್ಠೆ ಹಾಗೂ ಸತ್ಯದ ಮಾರ್ಗವನ್ನು ಅನುಸರಿಸುವ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು. ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯವಿದ್ದು, ಆಯುರ್ವೇದ, ನ್ಯಾಚುರೋಪತಿ ಹಾಗೂ ಸ್ವದೇಶಿ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ರಾಮನು ಮರ್ಯಾದಾ ಪುರುಷೋತ್ತಮನಾಗಿದ್ದು, ಪಿತೃವಾಕ್ಯ ಪಾಲನೆ, ಏಕಪತ್ನೀತ್ವ, ಶಿಷ್ಟಾಚಾರ ಹಾಗೂ ಶ್ರೇಷ್ಠ ಆಡಳಿತದ ಸಂಕೇತ ಎಂದು ವಿವರಿಸಿದರು. ಪ್ರತಿಯೊಬ್ಬರೂ ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಬೆಳೆದು ದೇಶ ರಾಮರಾಜ್ಯವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಭಾರಿಗಳಾದ ನಾಗೇಶ್ ಕೇಶವಮೂರ್ತಿ ಹಾಗೂ ಶಾರದಾ ಅವರು ಯೋಗಾಸನ ಪ್ರದರ್ಶನ ನಡೆಸಿ, ಯೋಗಾಭ್ಯಾಸದ ಮಹತ್ವವನ್ನು ಪ್ರಾಯೋಗಿಕವಾಗಿ ತಿಳಿಸಿದರು. ರಾಜ್ಯ ಯುವ ಪ್ರಭಾರಿ ಸುರೇಶ್ ಪ್ರಜಾಪತಿ ಅವರು ಪತಂಜಲಿ ಸಂಸ್ಥೆಯ ಬೆಳವಣಿಗೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪರಿಚಯಿಸಿದರು.ಕಾರ್ಯಕ್ರಮದಲ್ಲಿ ಎಲ್ಲಾ ಪ್ರಭಾರಿಗಳು, ಯೋಗಸಾಧಕರು ಹಾಗೂ ವೇದಭಾರತಿಯ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ಪ್ರಭಾರಿ ನಟರಾಜ್ ಅವರು ಸ್ವಾಗತ ಕೋರಿದರೆ, ಜಿಲ್ಲಾ ಸಂರಕ್ಷಕರಾದ ಲೋಕನಾಥ್ ಅವರು ವಂದನಾರ್ಪಣೆ ಸಲ್ಲಿಸಿದರು.