ಶಿವಮೊಗ್ಗ ಜಿಲ್ಲೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಅವರಿಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಶನಿವಾರ ಶ್ರೀರಾಮಸೇನೆ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ: ಶಿವಮೊಗ್ಗ ಜಿಲ್ಲೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಅವರಿಗೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಶನಿವಾರ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಕಳೆದ 50 ವರ್ಷಗಳಿಂದ ದೇಶ, ಧರ್ಮಕ್ಕಾಗಿ ಮನೆ, ಮಠ, ಸಂಸಾರ ತ್ಯಜಿಸಿ ಜೀವನವನ್ನೇ ದೇಶ, ಧರ್ಮಕ್ಕೆ ಮೀಸಲಾಗಿರಿಸಿದವರು. ಅಂತಹವರನ್ನು ರಾಜ್ಯ ಸರ್ಕಾರ ಸಕಾರಣವಿಲ್ಲದೆ ಪದೇ ಪದೇ ಹಲವು ಜಿಲ್ಲೆಗಳ ಪ್ರವೇಶ ನಿರ್ಬಂಧಿಸುತ್ತಿರುವುದು ಖಂಡನಾರ್ಹ. ಈ ನೀತಿಯಿಂದಾಗಿ ಸಂವಿಧಾನ, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸರ್ಕಾರದ ಈ ನಡೆಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹಾಗೂ ಅಲ್ಲಿನ ಜಿಲ್ಲಾಡಳಿತ ತಕ್ಷಣವೇ ನಿರ್ಬಂಧ ವಾಪಸ್ ಪಡೆದು ಸಂವಿಧಾನದತ್ತ ಹಕ್ಕನ್ನು ಎತ್ತಿ ಹಿಡಿಯಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ಕಾರ್ಯಕರ್ತರು ರಾಜ್ಯಾದ್ಯಂತ ಉಗ್ರವಾದ ಹೋರಾಡ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಅನ್ನಪ್ಪ ದಿವಟಿ, ಮಂಜುನಾಥ ಕಾಟ್ಕರ್, ವೀರಯ್ಯಸ್ವಾಮಿ ಸಾಲಿಮಠ ಸೇರಿದಂತೆ ಹಲವರಿದ್ದರು.