ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಬಸವೇಶ್ವರ ವೃತ್ತ, ಶ್ರೀ ಬಸವರಾಜೇಂದ್ರ ದೇವಸ್ಥಾನ, ಶ್ರೀ ಶಾಂತೇಶ್ವರ ದೇವಸ್ಥಾನ, ಎಪಿಎಂಸಿ, ಅಗಸಿ ಹನುಮಾನ ದೇವಸ್ಥಾನ, ಸರಾಪ ಬಜಾರ್, ಕೆಇಬಿ ಹನುಮಾನ ದೇವಸ್ಥಾನ, ಕೆಇಬಿ ಸೇವಾಲಾಲ ದೇವಸ್ಥಾನ ಸೇರಿದಂತೆ ಹಲವು ಪ್ರದೇಶದಲ್ಲಿ ಶ್ರೀರಾಮ ದೇವರ ಭಾವಚಿತ್ರ ಇಟ್ಟು ವಿಶೇಷ ಪೂಜೆ, ಹೋಮ, ಭಜನೆ, ಮಹಾಮಂಗಳಾರುತಿ, ಮಹಾಪ್ರಸಾದ ಮೊದಲಾದ ಕಾರ್ಯಕ್ರಮಗಳು ನಡೆಸಿ ಶ್ರೀರಾಮ ದೇವರಿಗೆ ಭಕ್ತಿಭಾವದಿಂದ ಭಕ್ತಿಯನ್ನು ಸಮರ್ಪಿಸಿದರು. ಎಲ್ಲ ದೇವಸ್ಥಾನದಲ್ಲಿ ಸಿಹಿ ಪ್ರಸಾದ ವಿತರಿಸುವ ಕೆಲಸ ಭಕ್ತಿಭಾವದಿಂದ ನಡೆಯಿತು. ಕೆಲ ಯುವ ಸಂಘಟನೆ ಕಾರ್ಯಕರ್ತರು ಶ್ರೀರಾಮ, ಹನುಮಾನ ಭಾವಚಿತ್ರ ಹೊಂದಿರುವ ಕೇಸರಿ ಧ್ವಜಗಳೊಂದಿಗೆ ಬೈಕ್ ರ್‍ಯಾಲಿ ನಡೆಸಿದರು.ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ದೇವಸ್ಥಾನ ಸೇರಿದಂತೆ ಮನೆ ಮನೆಗಳಲ್ಲಿ ಶ್ರೀರಾಮ ಪೂಜೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಹನುಮಾನ ದೇವಾಲಯಗಳನ್ನು ಸ್ವಚ್ಛಗೊಳಿಸಿ ವೃತ್ತ ಹಾಗೂ ದೇವಾಲಯದ ಮೇಲೆ ಕೇಸರಿ ಧ್ವಜಗಳು, ಕೇಸರಿ ಶಾಲುಗಳಿಂದ ಅಲಂಕೃತ ಮಾಡಲಾಗಿದೆ. ಯುವ ಸಮುದಾಯ ಕೇಸರಿ ಟೊಪಿ ಹಾಗೂ ಕೊರಳಲ್ಲಿ ಕೇಸರಿ ಶ್ಯಾಲು ಧರಿಸಿ ಶ್ರೀರಾಮ ಘೋಷಣೆ ಕೂಗುತ್ತ, ಸಂಭ್ರಮಿಸಿದರು.
ಬೆಳಗ್ಗೆಯಿಂದಲೇ ಮನೆಗಳಲ್ಲಿ, ಪ್ರಮುಖ ದೇವಸ್ಥಾನ, ವೃತ್ತಗಳಲ್ಲಿ ಶ್ರೀರಾಮ ಭಾವಚಿತ್ರವಿಟ್ಟು ದೀಪಾಲಂಕಾರ ಮಾಡಲಾಗಿತ್ತು. ಪಟ್ಟಣದ ವಿವಿಧ ಸಂಘ- ಸಂಸ್ಥೆಯ ಪ್ರಮುಖರು ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದರು. ಸಂಜೆ ಮನೆಗಳ ಮುಂದೆ ದೀಪ ಬೆಳಗಿಸಿ, ದೀಪಾವಳಿ ಆಚರಿಸುವ ತಯಾರಿ ನಡೆಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆ, ವ್ಯಾಪರಸ್ಥರು ಹಮ್ಮಿಕೊಂಡ ಶ್ರೀರಾಮ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಡವಲಗಾ ಗ್ರಾಮ ಅಭಿನವ ರಾಚೋಟೇಶ್ವರ ಶ್ರೀಗಳು, ಶಿರಶ್ಯಾಡದ ಅಭಿನವ ಮುರುಘೆಂದ್ರ ಶಿವಾಚಾರ್ಯ ಮಾತನಾಡಿ, ರಾಮ ಎಂದರೇ ಕಷ್ಟಗಳನ್ನು ಎದುರಿಸುವಾಗೆಲ್ಲ ನೆನಪಿಸಿಕೊಳ್ಳಬೇಕಾದ ಆದರ್ಶ, ರಾಮ ಎಂದರೇ ಜೀವನ ಆರಾಮ. ಶ್ರೀರಾಮ ದೇವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಶತಮಾನಗಳ ಸಂಕಲ್ಪ ಈಡೇರಿದೆ. ಅಸಂಖ್ಯಾತ ಭಕ್ತರ ತಪಸ್ಸು, ತ್ಯಾಗ, ಬಲಿದಾನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ತಿಳಿಸಿದರು.
ನ್ಯಾಯವಾದಿ ಸತೀಶ್ಚಂದ್ರ ಕುಲಕರ್ಣಿ, ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಅನೀಲಗೌಡ ಬಿರಾದಾರ, ಶಾಂತು ಶಿರಕನಹಳ್ಳಿ, ಭೀಮು ಪ್ರಚಂಡಿ, ಉಮೇಶ ಲಚ್ಯಾಣ, ನೀಲಪ್ಪ ಖಾನಾಪುರ, ಬಾಳು ಗವಳಿ, ಅಪ್ಪು ಪವಾರ, ವಿಜಯಕುಮಾರ ಮಾನೆ, ಲಾಯಪ್ಪ ದೊಡ್ಡಮನಿ, ಮಹೇಶ ಕುಂಬಾರ, ಪ್ರಕಾಶ ಬಿರಾದಾರ, ರಾಮಸಿಂಗ ಕನ್ನೊಳ್ಳಿ, ಪಿಂಟು ಕಿರಣಗಿ, ಸಂತೋಷ ಕಕ್ಕಳಮೇಲಿ, ದೇವೆಂದ್ರ ಕುಂಬಾರ, ಅಂಬರೀಶ ಬಿಸನಾಳ, ಶಾಂತು ತೆನ್ನಿಹಳ್ಳಿ, ಶಾಂತು ದೇವರ, ಯಮುನಾಜಿ ಸಾಳುಂಕೆ, ಸಂಜು ದಶವಂತ, ವಜ್ರಕಾಂತ ಕುಡಿಗನೂರ, ಮಂಜು ದೇವರ, ಶಂಕರ ಸೌದಿ ಮೊದಲಾದವರು ಪೂಜಾ ಹಾಗೂ ಮಹಾಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.