ಸಾರಾಂಶ
ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಪಟ್ಟಸೋಮನಹಳ್ಳಿಯ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ. ಹಾಗೇ ಕಿಕ್ಕೇರಿ ಹೋಬಳಿಯಲ್ಲಿ ಜನರು ಸಂಭ್ರಮಾಚರಣೆಗೆ ಕಾಯುತ್ತಿದ್ದಾರೆ. ಪ್ರತಿ ಮನೆಗಳಲ್ಲಿ ರಾಮನಾಮ ಜಪಿಸಲು ಆರಂಭಿಸಿದ್ದಾರೆ. ಮನೆಗಳನ್ನು ಶುಚಿಗೊಳಿಸಿಕೊಂಡು ರಾಮದೇವರ ಮಂತ್ರಾಕ್ಷತೆ, ರಾಮಮಂದಿರ, ರಾಮದೇವರ ಭಾವಚಿತ್ರಗಳನ್ನು ಇಡಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ತಾಲೂಕಿನ ಪಟ್ಟಸೋಮನಹಳ್ಳಿಯ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ.ಗ್ರಾಮದ ಶ್ರೀರಾಮ ಮಂದಿರದಲ್ಲಿ ಸೋಮವಾರ ರಾಮ ದೇವರಿಗೆ ವಿಶೇಷ ಪೂಜೆ, ಶ್ರೀರಾಮತಾರಕ ಜಪ, ಭಜನೆ, ಗೋಗಂಗಾ ಪೂಜೆ, ಪೂರ್ಣಕುಂಭ ಮೆರವಣಿಗೆ, ಹೋಮ, ಪೂರ್ಣಾಹುತಿ, ರಕ್ಷಾಧಾರಣೆ, ಮಹಾ ಮಂಗಳಾರತಿ, ನಂತರ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.
ಸಂಜೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ವಿಜೇತೆ ಡಾ.ಎಚ್.ಸಿ.ಮಾಲಿನಿ ಅವರಿಂದ ಹರಿಕಥೆ ನಡೆಯಲಿದೆ. ಗ್ರಾಮದ ಯಜಮಾನರಾದ ಈರೇಗೌಡ, ಆನಂದ್, ಎನ್.ಗೋಪಾಲ್, ಎಲ್.ಲಿಂಗೇಗೌಡ, ಪಟೇಲ್ ಲಿಂಗೇಗೌಡ, ಕರೀಗೌಡ, ಮರಿಸ್ವಾಮಿಗೌಡ, ಸೋಮೇಗೌಡ, ಲಿಂಗೇಗೌಡ, ಕೆ.ನಾಗರಾಜು, ಎಂ.ರಾಮಸ್ವಾಮಿ, ರಮೇಶ್, ಶಿವಕುಮಾರ್, ದಿನೇಶ್, ಕುಮಾರ್, ವಾಸು ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ವಿಶೇಷ ಪೂಜೆ:
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ದೇವರ ಪ್ರತಿಷ್ಠಾಪನೆ ಪ್ರಯುಕ್ತ ಪಟ್ಟಣದ ಬೀರಶೆಟ್ಟಹಳ್ಳಿ ಶ್ರೀಆಂಜನೇಯ ದೇವಸ್ಥಾನ, ಪೇಟೆಬೀದಿ ಶ್ರೀರಾಮಮಂದಿರ, ಕಾಮನಚೌಕದ ಶ್ರೀರಾಮಮಂದಿರ, ಬನಘಟ್ಟ ಗ್ರಾಮದ ಆಂಜನೇಯ ದೇವಸ್ಥಾನ ಸೇರಿದಂತೆ ತಾಲೂಕಿನ ರಾಮಮಂದಿರದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಸಲಾಗುತ್ತಿದೆ.ರಾಮಮಂದಿರ ಪ್ರತಿಷ್ಟಾಪನೆಗೆ ಹೋಬಳಿಯಾದ್ಯಂತ ಸಂಭ್ರಮ
ಕಿಕ್ಕೇರಿ: ಆಯೋಧ್ಯೆಯಲ್ಲಿ ಶ್ರೀರಾಮಂದಿರ, ಬಾಲರಾಮ ವಿಗ್ರಹ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ ಹೋಬಳಿಯಲ್ಲಿ ಜನರು ಸಂಭ್ರಮಾಚರಣೆಗೆ ಕಾಯುತ್ತಿದ್ದಾರೆ.ಪ್ರತಿ ಮನೆಗಳಲ್ಲಿ ರಾಮನಾಮ ಜಪಿಸಲು ಆರಂಭಿಸಿದ್ದಾರೆ. ಮನೆಗಳನ್ನು ಶುಚಿಗೊಳಿಸಿಕೊಂಡು ರಾಮದೇವರ ಮಂತ್ರಾಕ್ಷತೆ, ರಾಮಮಂದಿರ, ರಾಮದೇವರ ಭಾವಚಿತ್ರಗಳನ್ನು ಇಡಲಾಗಿದೆ. ಪಟ್ಟಣದ ವಿಪ್ರ ಸಮಾಜ, ಕುರುಹಿನಶೆಟ್ಟಿ, ಒಕ್ಕಲಿಗರ ರಾಮಮಂದಿರ, ಬ್ರಹ್ಮೇಶ್ವರದೇಗುಲ, ಆನೆಗೊಳ, ಮಾದಾಪುರ, ಡಾಣನಹಳ್ಳಿ, ಮಂದಗೆರೆ, ಗದ್ದೆಹೊಸೂರು, ಕಡಹೆಮ್ಮಿಗೆ, ಗೂಡೆಹೊಸಹಳ್ಳಿಯ ಮಾರುತಿ ಮಂದಿರ ಸೇರಿದಂತೆ ಹೋಬಳಿಯ ಪ್ರತಿ ಹಳ್ಳಿಗಳಲ್ಲಿ ಗ್ರಾಮದೇವತೆ ದೇಗುಲಗಳನ್ನು ಶುಚಿಗೊಳಿಸಲಾಗಿದೆ.
ಗ್ರಾಮಸ್ಥರು ಒಗ್ಗಟ್ಟಿನಿಂದ ದೇಗುಲ ಪರಿಸರವನ್ನು ಶುಚಿಗೊಳಿಸಿ ತಳಿರು ತೋರಣದಿಂದ ಶೃಂಗರಿಸಲಾಗಿದೆ. ಕೇಸರಿ ಧ್ವಜಗಳ ಹಾರಾಟದಿಂದ ಇಡೀ ಹೋಬಳಿ ರಾಮ ನಾಮ ಸ್ಮರಣೆಯಲ್ಲಿ ಮುಳುಗಿದೆ. ರಾಮದೇವರ ವಿಗ್ರಹ ಪ್ರತಿಷ್ಟಾಪನೆ ವೇಳೆ ರಾಮನಾಮಜಪ, ಕೀರ್ತನೆ, ಹೋಮ ಕಾರ್ಯ ನಡೆಸಲು ಮುಂದಾಗಿದ್ದಾರೆ. ಭಕ್ತರಿಗೆ ಹಲವೆಡೆ ಸಾಮೂಹಿಕ ಅನ್ನದಾಸೋಹ ವ್ಯವಸ್ಥೆ, ಸಿಹಿ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.