ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಉತ್ತರಾದಿ ಮಠದಲ್ಲಿ ಶ್ರೀರಾಮ ನವಮಿ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ, ಮನ್ಯುಸೂಕ್ತ ಮುಂತಾದ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಉತ್ತರಾದಿ ಮಠದಲ್ಲಿ ಶ್ರೀರಾಮ ನವಮಿ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ, ಮನ್ಯುಸೂಕ್ತ ಮುಂತಾದ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು. ನಂತರ ವಿವಿಧ ಪುಷ್ಪ ಹಾಗೂ ತಳಿರು ತೋರಣಗಳಿಂದ ಅಲಂಕೃತಗೊಂಡ ತೊಟ್ಟಿಲಲ್ಲಿ ಬಾಲ ರಾಮನ ಮೂರ್ತಿಯನ್ನಿರಿಸಿ ನಾಮಕರಣದ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ರಾಮನ ಹಾಡುಗಳು, ಜಯಘೋಷ ಹಾಗೂ ವಿವಿಧ ಮಂಗಳಾಷ್ಟಕಗಳೊಂದಿಗೆ ಮಧ್ಯಾಹ್ನ 12 ಗಂಟೆಗೆ ಶ್ರೀರಾಮನ ತೊಟ್ಟಿಲೋತ್ಸವ ಜರುಗಿತು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತ ವೃಂದ ಉತ್ಸವಕ್ಕೆ ಸಾಕ್ಷಿಯಾದರು.ಈ ಸಂದರ್ಭದಲ್ಲಿ ಶ್ರೀಮಠದ ಅರ್ಚಕ ವಾದಿರಾಜ ಆಚಾರ್ಯ ಯಜುರ್ವೇದಿ ಮಾತನಾಡಿ, ಶ್ರೀರಾಮನ ಆದರ್ಶಗಳು ಪ್ರತಿಯೊಬ್ಬರಲ್ಲೂ ಬೆಳೆದು ಬರಲೆಂಬ ಆಶಯ ವ್ಯಕ್ತಪಡಿಸಿದರು.ಅಲ್ಲದೇ, ಶ್ರೀರಾಮ ರಕ್ಷಾ ಸ್ತೋತ್ರದ ಮಹತ್ವವನ್ನು ತಿಳಿಸಿದರು.
ಸ್ಥಳೀಯ ಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿರುವುದರಿಂದ ಶ್ರೀರಾಮ ನವಮಿ ಉತ್ಸವವನ್ನು ಶ್ರೀಮಠದಲ್ಲಿ ಆಚರಿಸಲಾಗುತ್ತಿದೆ. ಈ ವೇಳೆ ಭಕ್ತರಿಗೆ ಪಾನಕ, ಕೋಸಂಬರಿ ಮತ್ತು ತೀರ್ಥ ಪ್ರಸಾದದ ವ್ಯವಸ್ಥೆಯನ್ನು ಕುಲಕರ್ಣಿ (ಮುರಾರಿ) ಬಂಧಗಳು ಏರ್ಪಡಿಸಿದ್ದರು.