ಸಾರಾಂಶ
ಮಂಗಳೂರು: ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿರುವ ಪ್ರತಿಷ್ಟಿತ ಸಹಕಾರ ಮಾಣಿಕ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಸಾಧನೆ ಗಮನಿಸಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನವರು ಗುರುತಿಸಿ ಇತ್ತೀಚೆಗೆ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಂಘಕ್ಕೆ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಈ ಸೊಸೈಟಿಯು ೨೦೨೪-೨೫ನೇ ಸಾಲಿನಲ್ಲಿ ೫೮೯ ಕೋಟಿ ರು. ಠೇವಣಿ, ೫೦೫ ಕೋಟಿ ರು. ಸಾಲದೊಂದಿಗೆ ಒಟ್ಟು ೧,೦೯೪ ಕೋಟಿ ರು. ವ್ಯವಹಾರ ದಾಖಲಿಸಿದೆ. ಅಲ್ಲದೆ 16.29 ಕೋಟಿ ರು. ನಿವ್ವಳ ಲಾಭ ಗಳಿಸಿ ಕಳೆದ ೧೮ ವರ್ಷದಿಂದ ನೆಟ್ ಎನ್.ಪಿ.ಎ. ಯನ್ನು ಶೂನ್ಯ ಪ್ರಮಾಣದಲ್ಲಿರಿಸಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ ಜಿಲ್ಲೆಯ ಅತ್ಯುತ್ತಮ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಎಂದು ಗುರುತಿಸಿಕೊಂಡಿದೆ.ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ರವರು ಉಭಯ ಜಿಲ್ಲೆಗಳಾದ ದ.ಕ. ಮತ್ತು ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್. ಎನ್. ರಮೇಶ್ ಮತ್ತು ಲಾವಣ್ಯ ಕೆ. ಆರ್., ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಸರ್ವ ನಿರ್ದೇಶಕರುಗಳು, ದ. ಕ. ಮತ್ತು ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷರುಗಳು, ಸಂಘದ ನಿರ್ದೇಶಕ ದಯಾಕರ ಆಳ್ವರವರ ಸಮಕ್ಷಮದಲ್ಲಿ ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರಿಗೆ ಹಾಗೂ ಮಹಾಪ್ರಬಂಧಕ ಗಣೇಶ್ ಜಿ.ಕೆ.ಯವರಿಗೆ ಸಾಧನಾ ಪ್ರಶಸ್ತಿ ಪ್ರದಾನ ಮಾಡಿದರು.ಸಂಘಕ್ಕೆ ಈ ಪ್ರಶಸ್ತಿಯು ಕಳೆದ ೯ ವರ್ಷಗಳಿಂದ ಸತತವಾಗಿ ಹಾಗೂ ಒಟ್ಟು ೧೪ನೇ ಬಾರಿಗೆ ಲಭಿಸಿರುವುದು ದಾಖಲೆಯಾಗಿದೆ.