ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಸಿರಾಗೇಟ್ ಸಮೀಪದ ಡಿ.ಎಂ. ಪಾಳ್ಯದಲ್ಲಿರುವ ಶ್ರೀ ರೇವಣ ಸಿದ್ದೇಶ್ವರ ಗುರು ಮಠದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿಯ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವನ್ನು ಫೆ. 15 ಮತ್ತು 16ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಠಾಧ್ಯಕ್ಷ ಎಸ್. ಬಿಂದುಶೇಖರ್ ಒಡೆಯರ್ ತಿಳಿಸಿದರು.ಡಿ.ಎಂ. ಪಾಳ್ಯದ ಶ್ರೀ ರೇವಣಸಿದ್ದೇಶ್ವರ ಗುರು ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದಲ್ಲಿ ಮಹಾಶಿವರಾತ್ರಿ ಸಂದರ್ಭದಲ್ಲಿ 2 ದಿನಗಳ ಶ್ರೀಸ್ವಾಮಿಯ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಫೆ.15ರಂದು ಬೆಳಿಗ್ಗೆ 9 ಗಂಟೆಯಿಂದ ಗಂಗಾಪೂಜೆ, ಶ್ರೀ ರೇವಣಸಿದ್ದೇಶ್ವರ ಸ್ವಾಮಿಗೆ ರುದ್ರಹೋಮ, ರುದ್ರಾಭಿಷೇಕ, ಗದ್ದುಗೆ ಪೂಜೆ, ನಾಗದೇವತಾ ವರ್ಷಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಲಿದೆ ಎಂದರು.
ಅಂದು ಸಂಜೆ 6.30ಕ್ಕೆ ವಿವಿಧ ದೇವರುಗಳ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ಶ್ರೀಮಠದ ರೇವಣ ಸಿದ್ದೇಶ್ವರ ಸ್ವಾಮಿ, ಸಿರಾ ತಾಲೂಕು ಮೂಗನಹಳ್ಳಿಯ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ, ಸದಾಶಿನಗರದ ಬೀರಲಿಂಗೇಶ್ವರಸ್ವಾಮಿ, ಸಿವಿಡಿ ಪಾಳ್ಯದ ಬೀರಲಿಂಗೇಶ್ವರಸ್ವಾಮಿ, ಸಿರಾಗೇಟ್‌ನ ಏಕನಾಥೇಶ್ವರಿ ಅಮ್ಮನವರು, ತಿಪ್ಪೂರಮ್ಮನಪಾಳ್ಯದ ಕುಂಚ್ಚಂಗಿ ಅಮ್ಮ, ಇರಕಸಂದ್ರದ ಮೈಲಾರಲಿಂಗೇಶ್ವರಸ್ವಾಮಿ, ವೆಂಕೇಶಪುರದ ವೆಂಕಟೇಶ್ವರಸ್ವಾಮಿ, ಡಿ.ಎಂ. ಪಾಳ್ಯದ ಶ್ರೀ ಲಕ್ಷಿದೇವರು, ಜನುಪನಹಳ್ಳಿಯ ಶ್ರೀ ಲಕ್ಷಿದೇವರು, ಕರಲುಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಕೆರೆಶಾಂತಮ್ಮ, ಲಿಂಗಾಪುರದ ಶನಿಮಹಾದೇರು, ಪಿ.ಎನ್.ಆರ್. ಪಾಳ್ಯದ ಶ್ರೀ ಆಂಜನೇಯಸ್ವಾಮಿ ದೇವರುಗಳು ಪಾಲ್ಗೊಳ್ಳಲಿವೆ ಎಂದು ಅವರು ಹೇಳಿದರು.ರಾತ್ರಿ 10.30ಕ್ಕೆ ಅರೇ ಆಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀ ಶನಿಮಹಾತ್ಮ ಕಥಾ ಕಲಾಕ್ಷೇಪ ಏರ್ಪಡಿಸಲಾಗಿದೆ ಎಂದರು. ಫೆ. 16ರಂದು ಬೆಳಿಗ್ಗೆ 7.30ಕ್ಕೆ ದಾಸರಮುದ್ದಯ್ಯನಪಾಳ್ಯ ಹಾಗೂ ಸುತ್ತಮುತ್ತಲ ಗ್ರಾಮದ ಆಸಕ್ತ ಭಕ್ತ ಮಹಿಳೆಯರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಬಿಂದುಶೇಖರ್ ಒಡೆಯರ್ ನೇತೃತ್ವದಲ್ಲಿ ಶ್ರೀಮಠಕ್ಕೆ ಸೇರಿರುವ ಗೌಡರು, ಯಜಮಾನರು, ಬಳಗ ಭಂಡಾರಿಗಳು, ಅರಿವಾಣದವರು, ಕೋಲ್ಕಾರರು, ದಾಸಪ್ಪಂದಿರು, ಗೊರಯ್ಯಂದಿರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ವಿವರಿಸಿದರು.
ಈ ಜಾತ್ರಾ ಮಹೋತ್ಸವಕ್ಕೆ ಹಲವು ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರುಗಳನ್ನು ಆಹ್ವಾನಿಸಲಾಗಿದೆ ಎಂದ ಅವರು, ಜಾತ್ರೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದರು. ಶ್ರೀಮಠದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು.
