ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಶ್ರೀಸಂಗಮೇಶ್ವರ ಹಾಗೂ ಶ್ರೀಕಾಮಾಕ್ಷಮ್ಮ ದೇವಿ ಬ್ರಹ್ಮ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.ಶಾಸಕ ಎಚ್.ಟಿ.ಮಂಜು ಹಾಗೂ ಕೆ.ಆರ್.ನಗರ ಕ್ಷೇತ್ರದ ಶಾಸಕ ರವಿಶಂಕರ್ ರಥೋತ್ಸವದಲ್ಲಿ ಭಾಗವಹಿಸಿ ಉತ್ಸವ ಮೂರ್ತಿಗೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಂಗಮೇಶ್ವರ ದೇವಾಲಯದ ಹಳೆಯ ರಥವು ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಕಳೆದ 12 ವರ್ಷಗಳ ಹಿಂದೆ ನಿಂತು ಹೋಗಿದ್ದ ಸಂಗಮೇಶ್ವರ ಸ್ವಾಮಿ ರಥೋತ್ಸವವು ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿ ಸಮಿತಿ ಸಂಚಾಲಕ ಡಾ.ಅಂಚಿ ಸಣ್ಣ ಸ್ವಾಮೀಗೌಡ ಅವರ ವಿಶೇಷ ಆಸಕ್ತಿಯಿಂದಾಗಿ ದಾನಿಗಳ ಸಹಕಾರದಿಂದ 30ಲಕ್ಷ ರು. ವೆಚ್ಚದಲ್ಲಿ ತೇಗದ ಮರದಿಂದ ಹೊಸ ರಥವನ್ನು ನಿರ್ಮಿಸಿದ್ದು ಇಂದು ನೂತನ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಶಾಸಕಧ್ವಯರು ರಥೋತ್ಸವಕ್ಕೆ ಚಾಲನೆ ನೀಡಿದರು.ಕೆ.ಆರ್.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಸಂಗಮೇಶ್ವರ ಸ್ವಾಮಿ ಅಡ್ಡ ಪಲ್ಲಕಿಯನ್ನು ಹೆಗಲ ಮೇಲೆ ಹೊತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಹರಕೆ ತೀರಿಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ಗಮನ ಸೆಳೆಯಿತು.
ಶಾಸಕ ಮಂಜು ಮಾತನಾಡಿ, ತ್ರಿವೇಣಿ ಸಂಗಮ ಕ್ಷೇತ್ರವು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿದೆ. ಪುಣ್ಯ ಸ್ನಾನ ಮಾಡಲು ಪವಿತ್ರ ತ್ರಿವೇಣಿ ಸಂಗಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕನಿಷ್ಠ ಸೌಲಭ್ಯಗಳಿಲ್ಲ. ಈ ಬಗ್ಗೆ ಮುಖ್ಯ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸುತ್ತೇನೆ ಎಂದರು.ಈ ವೇಳೆ ರಾಜ್ಯದ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಂ.ಚಿ. ಸಣ್ಣಸ್ವಾಮೀಗೌಡ, ಸೋಮನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ವಿಶ್ರಾಂತ ನ್ಯಾಯಮೂರ್ತಿ ಶ್ರೀನಿವಾಸ ಗೌಡ, ಸೇರಿದಂತೆ ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು. ನಾಡಿನ ಖ್ಯಾತ ಜಾನಪದ ಗಾಯಕ ಶಿವಾರ ಉಮೇಶ್ ಅವರಿಂದ ಸುಗಮ ಸಂಗೀತ ಗೀತ ಗಾಯನ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀರಥವನ್ನು ನಿರ್ಮಿಸಿದ ಶಿಲ್ಪಿ ಶ್ರೀರಂಗಪಟ್ಟಣ ತಾಲೂಕು ಗಂಜಾಂ ನಾಗರಾಜಾಚಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭೂ ವರಹನಾಥ ಕ್ಷೇತ್ರದಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಜರುಗಿತು.ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹುಟ್ಟುಹಬ್ಬ ಸರಳವಾಗಿ ಆಚರಣೆ
ಕೆ.ಎಂ.ದೊಡ್ಡಿ:ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ಹುಟ್ಟು ಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸುವ ಮೂಲಕ ಸರಳವಾಗಿ ಆಚರಿಸಿದರು.
ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ, ಜೆಡಿಎಸ್ ಯುವ ಮುಖಂಡ ರಘು ವೆಂಕಟೇಗೌಡ ಮಾತನಾಡಿ, ಡಿ.ಸಿ.ತಮ್ಮಣ್ಣ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕಿರುಗಾವಲು ಮತ್ತು ಮದ್ದೂರು ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುವ ಮೂಲಕ ಜನಪರ ನಾಯಕ ಎನಿಸಿಕೊಂಡಿದ್ದಾರೆ ಎಂದರು.ತಮ್ಮ ಇಳಿ ವಯಸ್ಸಿನಲ್ಲೂ ಕ್ಷೇತ್ರದ್ಯಾಂತ ಸುತ್ತಾಡಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಪ್ರಬಲಗೊಳಿಸುತ್ತಿದ್ದಾರೆ. ಇದುವ ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಅವರಿಗೆ ತಾಯಿ ಚಾಮುಂಡೇಶ್ವರಿ ತಾಯಿ ಆಯಸ್ಸು ಆರೋಗ್ಯ ನೀಡಿ ಕಾಪಡಾಲಿ ಎಂದು ಆಶಿಸಿದರು.
ಈ ವೇಳೆ ಸಮತ ಸೈನಿಕದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಮುಖಂಡರಾದ ಕಾರ್ಕಹಳ್ಳಿ ಮಹೇಶ್, ವಿಕಾಸ್ ಬೋರೇಗೌಡ, ಸಂತೋಷ್ ಸೇರಿದಂತೆ ಮತ್ತಿತರಿದ್ದರು.