ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿ

| Published : Dec 09 2024, 12:46 AM IST

ಸಾರಾಂಶ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾ ಮಕ್ಕಳ ರೈತ ಪೋಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಸೇವಾ ಮನೋಭಾವನೆಯೊಂದಿಗೆ ಆರಂಭಗೊಂಡು ಬೃಹತ್ ಪ್ರಮಾಣದಲ್ಲಿ ಬೆಳೆದು ವಿದ್ಯೆ ನೀಡುವ ಮೂಲಕ ಸಾವಿರಾರು ಮಕ್ಕಳಿಗೆ ಬೆಳಕಾಗಿರುವ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಎರಡು ದಿನಗಳ ಕಾಲ ಜರುಗಿದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾಸಂಸ್ಥೆ ಆರಂಭಿಸುವುದು ಮುಖ್ಯವಲ್ಲ. ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮುನ್ನಡೆಯುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಮುಂಚೂಣಿಯಲ್ಲಿದ್ದು, ಸಂಸ್ಥೆಯ ಏಳಿಗೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದು ಹೇಳಿದರು.

ಎಮೆರಿಟಸ್ ಪ್ರಾಧ್ಯಾಪಕಿ ಡಾ.ವಿಜಯದೇವಿ ಮಾತನಾಡಿ, ಭವಿಷ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ ಎಲ್ಲಾ ರೀತಿಯ ಆಯಾಮಗಳನ್ನು ಶಿಕ್ಷಣ ಸಂಸ್ಥೆ ಮೈಗೂಡಿಸಿಕೊಂಡಿದೆ ಎಂದರು.

ಶಿಕ್ಷಣ ಸಂಸ್ಥೆ ರಾಜ್ಯ ಸಂಯೋಜಕ ಡಿ.ಪ್ರಭಾಕರ ಬೀರಯ್ಯ ಮಾತನಾಡಿ, ಸತ್ಯಸಾಯಿ ಸೇವಾ ಸಂಸ್ಥೆ ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕವಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಇಂದಿನ ಮಕ್ಕಳಿಗೆ ಸಂಸ್ಕಾರಯುತ, ಮೌಲ್ಯಯುತವಾದ ಶಿಕ್ಷಣ ನೀಡುವುದು ಸಂಸ್ಥೆಯ ಗುರಿಯಾಗಿದೆ ಎಂದು ನುಡಿದರು.

ಎರಡು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ(ಆಡಳಿತ) ಎಸ್.ಆರ್.ಮಂಜುನಾಥ್, ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಪ್ರಶಾಂತಿ ಸೇವಾ ಟ್ರಸ್ಟ್ ತಾಲೂಕು ಗೌರವಾಧ್ಯಕ್ಷ ಎಂ. ದೇವೇಂದ್ರಪ್ಪ,ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಸೌಮ್ಯ, ಶಿಕ್ಷಣ ಸಂಯೋಜಕ ಜಿ.ಪಿ ಪರಮೇಶ್ವರಪ್ಪ, ಮುಖ್ಯೋಪಾಧ್ಯಾಯಿನಿ ಟಿ.ವಿ.ಸುಜಾತ, ಪ್ರಾಂಶುಪಾಲ ಮೃತ್ಯುಂಜಯ ಕಾನಿಟ್ಕರ್ ಸೇರಿ ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿರುವ ಪ್ರಾಂಶುಪಾಲ ಶಾಮರಾಯ ಆಚಾರ್‌ ಹಾಗೂ ಪ್ರತಿವರ್ಷ ವಾರ್ಷಿಕೋತ್ಸವದ ವೇದಿಕೆಯನ್ನು ನಿರ್ಮಿಸುತ್ತಿರುವ ಕಾಗದನಗರ ಸಂತೋಷ್ ಶಾಮಿಯಾನ ಮಾಲೀಕ ಸಂತೋಷ್‌ ಅವರನ್ನುಸನ್ಮಾನಿಸಿ ಅಭಿನಂದಿಸಲಾಯಿತು. ಶಾಲಾ ಮಕ್ಕಳಿಂದ ಮೌಲ್ಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು