ಸಾರಾಂಶ
ಇಂದಿನ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸಲು ಪರ ಊರುಗಳಿಗೆ ಕಳಿಸಬೇಕಾದದ್ದು ಅನಿವಾರ್ಯ
ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳಿಗೆ ಆಧುನಿಕ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕೊಡುವ ನಿಟ್ಟಿನಲ್ಲಿ ಹಿರಿಯರು ಜವಾಬ್ದಾರಿ ನಿರ್ವಹಿಸಬೇಕು ಎಂದು ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂ 3ನೇ ತಿರುವಿನಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಪ್ರಮೋದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಎಳವೆಯಲ್ಲೇ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ರೂಢಿಗತ ಮಾಡಬೇಕು ಎಂದರು.ಇಂದಿನ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸಲು ಪರ ಊರುಗಳಿಗೆ ಕಳಿಸಬೇಕಾದದ್ದು ಅನಿವಾರ್ಯವಾಗಿದೆ. ಅಂಥ ಸಂದರ್ಭದಲ್ಲಿ ಮಕ್ಕಳು ನಮ್ಮತನವನ್ನು ಬಿಡಬಾರದು. ಅವರಿಗೆ ಆರೋಗ್ಯಕರವಾದ ಊಟ, ವಸತಿ ಸೌಕರ್ಯ ಕಲ್ಪಿಸುವುದು ಮುಖ್ಯ. ಅದಕ್ಕೆ ಪೂರಕವಾಗಿ ಕಲಿಕೆಗೆ ಉತ್ತಮ ವಾತಾವರಣದ ವಸತಿಯೂ ಮುಖ್ಯ. ಈ ನಿಟ್ಟಿನಲ್ಲಿ ಶ್ರೀಮಠ ವಿಪ್ರ ಸಂಸ್ಕಾರವನ್ನು ದೊರಕಿಸಿ ಕೊಡಲು ಮುಂದಾಗಿದೆ ಎಂದು ಅವರು ಹೇಳಿದರು.ಹಿರಿಯರು, ಗುರುಗಳು, ಜ್ಞಾನಿಗಳು ಮತ್ತು ಸಾಧಕರನ್ನು ಮಕ್ಕಳು ಅನುಸರಿಸಬೇಕು. ಗುರುಕೃಪೆಯು ನಮ್ಮೆಲ್ಲಾ ಕಾರ್ಯ ಚಟುವಟಿಕೆಗಳಿಗೆ ಶ್ರೀರಕ್ಷೆ ಇದ್ದಂತೆ. ನಮ್ಮ ಗುರುಗಳು, ಮುಂಬೈ, ಹೈದರಾಬಾದ್, ಬೆಂಗಳೂರು ಮುಂತಾದಕಡೆ 50 ವರ್ಷಗಳ ಹಿಂದೆಯೇ ವಿದ್ಯಾರ್ಥಿನಿಲಯ ಸೌಲಭ್ಯ ಕಲ್ಪಿಸಿ ನೂರಾರು ಯುವಜನರಿಗೆ ಲೌಕಿಕ, ಅಧ್ಯಾತ್ಮಿಕ ಶಿಕ್ಷಣ ದೊರಕಿಸಿಕೊಡಲು ಬೆಂಬಲವಾಗಿ ನಿಂತಿದ್ದರು. ಅವರು ತೋರಿದ ಮಾರ್ಗದಲ್ಲೇ ಮಠ ಮುನ್ನಡೆದಿದೆ ಎಂದರು.ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪ್ರಕಾಶ್, ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ರಾಮಚಂದ್ರನ್, ಹಿರಿಯ ವಿದ್ವಾಂಸರಾದ ಗೋವಿಂದಾಚಾರ್ಯ, ಪುರುಷೋತ್ತಮಾಚಾರ್ಯ, ಶಶಿ ಆಚಾರ್ಯ, ಅನಿರುದ್ಧಾಚಾರ್ಯ, ಗುರುರಾಜ ಮೊದವಲಾದವರು ಇದ್ದರು.